ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆಯಿಂದ ಜನರು ಹೈರಾಣಾಗುತ್ತಿದ್ದಾರೆ. ಮೋಟರ್ ಸಂಪರ್ಕದ ಮೂಲಕ ನೀರು ಬಿಡಲಾಗುತ್ತಿದ್ದು, ಹೀಗೆ ನೀರು ತರಲು ಹೋದ ಮಹಿಳೆಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಸ್ಥಳೀಯರು ಪ್ರತಿಭಟನೆ ನಡೆಸಿರುವ ಘಟನೆ ಚಾಮರಾಜಪೇಟೆಯ ಮಾರ್ಕೆಟ್ ರಸ್ತೆಯ ಆನಂದಪುರದಲ್ಲಿ ನಡೆದಿದೆ.
ಇಲ್ಲಿರುವ ಮನೆಗಳಿಗೆ ನೀರಿನ ಸಂಪರ್ಕವಿಲ್ಲ. ಹೀಗಾಗಿ ದೊಡ್ಡ ಪೈಪ್ ಮೂಲಕ ಅಲ್ಲಲ್ಲಿ ಸಂಪರ್ಕ ಕೊಟ್ಟು, ನೀರು ಬಿಡಲಾಗುತ್ತಿದೆ. ಇದಕ್ಕಾಗಿ ಅಳವಿಡಿಸಿರುವ ಮೋಟಾರ್ ಚಾಲು ಮಾಡುವ ವೇಳೆ ವಿದ್ಯುತ್ ತಗುಲಿ ಮಹಿಳೆ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಮನೆಗಳಿಗೆ ನೀರಿನ ಸಂಪರ್ಕ ಸಿಗುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.