ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಆಗಸ್ಟ್ 27ರಂದು ಜಿಲ್ಲೆಯ 08 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಲೋಕಸೇವಾ(KPSC) ಆಯೋಗ ಅಧಿಸೂಚಿಸಿರುವ ಗೆಜೆಟೆಡ್ ಪ್ರೊಬೇಷನರ್(KAS) ಗ್ರೂಪ್ ಎ ಮತ್ತು ಗ್ರೂಪ ಬಿ ವೃಂದದ ಹುದ್ದೆಗಳಿಗೆ ನಡೆಯುವ ಪರೀಕ್ಷೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳಿಗೆ ಎರಡು ಬಾರಿ ತರಬೇತಿ ನೀಡಲಾಗಿದೆ. ಪರೀಕ್ಷಾ ಪ್ರಶ್ನೆ ಪತ್ರಿಕೆ ಬಂಡಲ್ ಗಳನ್ನು ಪಡೆದು ಜಿಲ್ಲಾ ಖಜಾನೆಯಲ್ಲಿ ಠೇವಣಿ ಇರಿಸಲು ಹಾಗೂ ಪರೀಕ್ಷಾ ದಿನ ನಿಗದಿತ ಸಮಯದೊಳಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆ ವಿತರಣಾ ತಂಡದವರಿಗೆ ಹಸ್ತಾಂತರಿಸಲು ತ್ರಿಸದಸ್ಯರ ಸಮಿತಿ ನೇಮಕ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರದ ವೀಕ್ಷಕರೆಂದು ನೇಮಕ ಮಾಡಿ ಆದೇಶಿಸಲಾಗಿದ್ದು, ಇವರು ಪರೀಕ್ಷೆ ಪ್ರಾರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು ಪರೀಕ್ಷಾ ಕೇಂದ್ರದ ಲಾಗಿನ್ ಮೂಲಕ ಅಗತ್ಯ ಮಾಹಿತಿ ಒದಗಿಸುವುದು. ಪರೀಕ್ಷಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ಪರೀಕ್ಷಾ(Exam) ದಿನದಂದು 08 ಪರೀಕ್ಷಾ ಕೇಂದ್ರಗಳಲ್ಲಿನ ಗೌಪ್ಯ ಸಾಮಗ್ರಿಗಳನ್ನು ಅಂಚೆ ಮೂಲಕ ರವಾನಿಸುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನ ಸಂಜೆ 6 ಗಂಟೆಯವರೆಗೆ ಅಂಚೆ ಕಚೇರಿ ತೆರೆಯಲು ಹಾಗೂ ಗೌಪ್ಯ ಸಾಮಗ್ರಿಗಳನು ಸ್ವೀಕರಿಸಲು ಅಂಚೆ ಅಧೀಕ್ಷಕರಿಗೆ ತಿಳಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಗೌಪ್ಯ ಸಾಮಗ್ರಿಗಳನ್ನು ಪೂರೈಸಲು ಮಾರ್ಗಾಧಿಕಾರಿಗಳನ್ನಾಗಿ ಅಧಿಕಾರಿಗಳನ್ನು ನೇಮಿಸಿದ್ದು, ಇವರು ಪರೀಕ್ಷಾ ದಿನದಂದು ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಖಜಾನೆಯಿಂದ ಗೌಪ್ಯ ಸಾಮಗ್ರಿಗಳನ್ನು ಪಡೆದುಕೊಂಡು ಸರ್ಕಾರಿ ವಾಹನದಲ್ಲಿ ನಿಗದಿತ ಸಮಯದಲ್ಲಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಒಪ್ಪಿಸಿ, ಸ್ವೀಕೃತಿ ಪಡೆದು ವರದಿ ನೀಡಲು ಸೂಚಿಸಲಾಗಿದೆ. ಪರೀಕ್ಷೆಯನ್ನು ಸೂಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಸ್ಥಳೀಯ ಜಾಗೃತ ದಳವನ್ನು ರಚಿಸಿಲಾಗಿದ್ದು, ಒಂದು ದಿನ ಮುಂಚೆ, ನಿಯೋಜಿಸಿದ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಮಾಹಿತಿ ಸಂಗ್ರಹಿಸಿ ವರದಿ ನೀಡುವುದು ಹಾಗೂ ಪರೀಕ್ಷಾ ದಿನದಂದು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್, ಮೊಬೈಲ್(MObile) ಪೊಲೀಸ್ ಸ್ಕ್ಯಾಡ್, ಹೆಚ್ಚುವರಿ ವಿಚಕ್ಷಣಾ ದಳ ನಿಯೋಜಿಸಲಾಗಿದೆ. ಪರೀಕ್ಷಾ ದಿನ ಪ್ರಶ್ನೆ ಪತ್ರಿಕೆ ವಿತರಣಾ ತಂಡದ ಬೆಂಗಾವಲಿಗೆ ಸಶಸ್ತ್ರ ಪೊಲೀಸರನ್ನು ನಿಯೋಜಿಸಿ ಅಗತ್ಯ ಎಲ್ಲಾ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ. ಸಿಸಿಟಿವಿ ಅಳವಡಿಸಿ ಕಣ್ಗಾವಲಿರಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಪರೀಕ್ಷಾ ದಿನದಂದು ವಿಜಯಪುರ ನಗರದ 8 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ 8.30ರಿಂದ ಪರೀಕ್ಷೆ ಮುಕ್ತಾಯವಾಗುವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕ ಸುರಕ್ಷಾ ಸಂಹಿತೆ-2023 ಕಲಂ 163ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.