ಪ್ರಜಾಸ್ತ್ರ ಸುದ್ದಿ
ಹಾಸನ(Hasana): ಇಲ್ಲಿನ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ ಬಾಗಿಲನ್ನು ಇಂದು ಸಂಪ್ರದಾಯಿಕ ಪದ್ಧತಿಗಳ ಮೂಲಕ ತೆರೆಯಲಾಯಿತು. ದೇವಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. ವರ್ಷದಲ್ಲಿ ಒಮ್ಮೆ ಮಾತ್ರ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತೆ.
ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಬಾಳೆಗೊನೆಯನ್ನು ಕಡಿದ ನಂತರ ಬಾಗಿಲು ತೆರೆಯಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಕೆ.ಎಂ ಶಿವಲಿಂಗೇಗೌಡ, ಎಂ.ಪಿ ಸ್ವರೂಪಪ್ರಕಾಶ್, ಸಂಸದ ಶ್ರೇಯಸ್ ಪಟೇಲ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಪಂಚಾಯ್ತಿ ಸಿಇಒ ಸೇರಿ ಅನೇಕರು ಭಾಗವಹಿಸಿದ್ದರು.
ಅಕ್ಟೋಬರ್ 9ರಿಂದ 23ರ ತನಕ ಜಾತ್ರೆ ನಡೆಯಲಿದೆ. ಮುಂಜಾನೆ 7 ಗಂಟೆಯಿಂದ 10 ಗಂಟೆಯ ತನಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಣ್ಯರಿಗೆ 10.30ರಿಂದ 12.30ರ ತನಕ ಅವಕಾಶ ನೀಡಲಾಗಿದೆ. ಗರ್ಭಗುಡಿಯ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಉರಿಯುತ್ತಿತ್ತು. ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ಆನ್ಲೈನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ.