ಪ್ರಜಾಸ್ತ್ರ ಸುದ್ದಿ
ಬಾರಬಂಕಿ(Barabanki): ಸ್ವಾತಂತ್ರ್ಯ ಸಿಕ್ಕು 77 ವರ್ಷಗಳು ಕಳೆದರೂ ಇಂದಿಗೂ ಅದೆಷ್ಟೋ ಊರುಗಳಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ವಿದ್ಯುತ್ ಇಲ್ಲ, ನೀರಿನ ಸೌಕರ್ಯವಿಲ್ಲ, ಬಸ್ ವ್ಯವಸ್ಥೆ ಇಲ್ಲ. ಶಿಕ್ಷಣದ ಪರಿಸ್ಥಿತಿಯೂ ಇನ್ನೂ ಶೋಚನೀಯ. ಯಾಕಂದರೆ ದೇಶದ ಅತಿದೊಡ್ಡ ವಿಧಾನಸಭೆ, ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾರೂ ಎಸ್ಎಸ್ಎಲ್ ಸಿ ಪಾಸ್ ಆಗಿರಲಿಲ್ಲ. ಇಂತಹ ಗ್ರಾಮದಲ್ಲಿ ಇದೀಗ ವಿದ್ಯಾರ್ಥಿಯೊಬ್ಬ ಈ ಸಾಧನೆ ಮಾಡಿದ್ದಾನೆ.
ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ನಿಜಾಮಪುರ ಗ್ರಾಮದ ವಿದ್ಯಾರ್ಥಿ ರಾಮಕೇವಲ್ ಎಸ್ಎಸ್ಎಲ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಈ ಗ್ರಾಮದಲ್ಲಿ ಬಹುತೇಕರು ದಲಿತ ಸಮುದಾಯದವರು ವಾಸವಾಗಿದ್ದಾರೆ. ರಾಮಕೇವಲ್ ಸಹ ಕೂಲಿ ಕೆಲಸ ಮಾಡುತ್ತಲೇ ಓದುತ್ತಿದ್ದ. ಇವನ ತಾಯಿ 5ನೇ ತರಗತಿ ಓದಿದ್ದಾರೆ. ತಂದೆ ಓದಿಯೇ ಇಲ್ಲ.
ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ಸನ್ಮಾನಿಸಿದ್ದಾರೆ. ಮುಂದಿನ ಓದಿಗೆ ಅಗತ್ಯ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಭರವಸೆ ನೀಡಿದ್ದಾರೆ. ರಾಮಕೇವಲ್ ನಿಂದ ಸ್ಪೂರ್ತಿ ಪಡೆದಿರುವ ಅನುತ್ತೀರ್ಣಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಈ ವಿಚಾರಗಳು ತಿಳಿದಾಗ ಶಿಕ್ಷಣದಿಂದ ತಳಸಮುದಾಯಗಳು ಇಂದಿಗೂ ಅದೆಷ್ಟೋ ವಂಚಿತರಾಗಿದ್ದಾರೆ ಎನಿಸುತ್ತದೆ.