ಪ್ರಜಾಸ್ತ್ರ ಸುದ್ದಿ
ಹಾಸನ(Hasana): ತಾಳಿ ಕಟ್ಟಲು ವರ ಸಿದ್ಧವಾಗಿರುವಾಗ ವಧು ಮದುವೆ ಬೇಡ ಎಂದು ನಿರಾಕರಿಸಿರುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಇದರಿಂದಾಗಿ ಮದುವೆ ಮುರಿದು ಬಿದ್ದಿದೆ. ತಾನೊಬ್ಬನನ್ನು ಪ್ರೀತಿಸುತ್ತಿದ್ದು, ಅವನನ್ನೇ ಮದುವೆಯಾಗುತ್ತೇನೆ ಎಂದು ಹುಡುಗಿ ಹಠ ಹಿಡಿದಿದ್ದಾಳೆ. ಪೋಷಕರು ಎಷ್ಟೇ ಹೇಳಿದರೂ ಕೇಳಿಲ್ಲ. ಇದರಿಂದಾಗಿ ಮದುವೆ ನಿಂತು ಹೋಗಿದ್ದು, ಎರಡು ಕುಟುಂಬಸ್ಥರಿಗೆ ಸಾಕಷ್ಟು ನೋವು ತಂದಿದೆ.
ಈ ಮದುವೆ ನಿನಗೆ ಇಷ್ಟವಿದ್ಯಾ ಎಂದು ವರ ಹಲವು ಬಾರಿ ಕೇಳಿದ್ದಾನೆ. ಆಕೆ ಇಲ್ಲವೆಂದು ಹೇಳಿದ್ದಾಳೆ. ಮನೆಯವರು ಹುಡುಗಿಯನ್ನು ಒಪ್ಪಿಸಲು ನೋಡಿದ್ದಾರೆ. ಆದರೆ, ತಾನು ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಹಸೆಮಣೆಯಿಂದ ಎದ್ದು ಕಲ್ಯಾಣ ಮಂಟಪದಿಂದ ಹೊರ ನಡೆದಿದ್ದಾಳೆ. ಹೀಗಾಗಿ ಎರಡು ಕಡೆ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸರ್ಕಾರಿ ಶಾಲೆ ಶಿಕ್ಷಕನಾಗಿರುವ ವರನ ಕಡೆಯುವರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿ ಮದುವೆ ನಡೆಸಿದ್ದರು. ಆದರೆ, ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದರಿಂದ ಎಲ್ಲವೂ ಹಾಳಾಗಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಘಟನೆಯಿಂದ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಯುವತಿ ನಡೆಗೆ ಬಂಧ ಬಳಗದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.