ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಪತ್ನಿ ಬದುಕಿದ್ದರೂ ಹತ್ಯೆಯ ಆರೋಪದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಸಂತ್ರಸ್ತ, ಇದೀಗ ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. 5 ಕೋಟಿ ರೂಪಾಯಿ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕುಶಾಲನಗರ ತಾಲೂಕಿನ ಬಸವನಹಳ್ಳಿ ನಿವಾಸಿ ಕುರುಬರ ಸುರೇಶ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2025ರ ಏಪ್ರಿಲ್ ನಲ್ಲಿ ಸಂಪೂರ್ಣ ಗೌರವಗಳೊಂದಿಗೆ ಖುಲಾಸೆಗೊಳಿಸಿತ್ತು.
ಸಂತ್ರಸ್ತ ಕುರಬರ ಸುರೇಶ ಎಂಬುವರ ಪತ್ನಿ ಮಲ್ಲಿಗೆ 2021ರಲ್ಲಿ ನಾಪತ್ತೆಯಾಗಿದ್ದರು. 2022ರಲ್ಲಿ ಮೈಸೂರು ಜಿಲ್ಲೆಯ ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಡಿಎನ್ಎ ಹೊಂದಾಣಿಕೆಯಿಲ್ಲದಿದ್ದರೂ ಸುರೇಶನನ್ನು ಬಂಧಿಸಿ ಕೊಲೆ ಆರೋಪ ಹೊರಿಸಲಾಗಿತ್ತು. ಆದರೆ, 2025 ಏಪ್ರಿಲ್ ನಲ್ಲಿ ಮಡಿಕೇರಿಯ ರೆಸ್ಟೋರೆಂಟ್ ನಲ್ಲಿ ಮಲ್ಲಿಗೆ ಊಟ ಮಾಡುತ್ತಿದ್ದಾಗ ಸುರೇಶ ಅವರ ಸ್ನೇಹಿತರು ನೋಡಿದ್ದರು. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಕೋರ್ಟ್ ಸುರೇಶಗೆ ಬಿಡುಗಡೆಗೊಳಿಸಿ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಹೇಳಿತ್ತು. ಆದರೆ, ಸುರೇಶ, ಅಂದಿನ ತನಿಖಾಧಿಕಾರಿ ಪ್ರಕಾಶ್ ಬಿಜಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್, ಪಿಎಸ್ಐಗಳಾದ ಪ್ರಕಾಶ್ ಯಟ್ಟಿಮನಿ, ಮಹೇಶ್ ಬಿ.ಕೆ, ಎಎಸ್ಐ ಸೋಮಶೇಖರ್ ಅನ್ನೋ ಐವರು ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 5 ಕೋಟಿ ರೂಪಾಯಿ ಪರಿಹಾರ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ.