ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಟೆಕ್ನಾಲಜಿ ಬೆಳದಂತೆ ಅವುಗಳ ದುರ್ಬಳಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾಕಷ್ಟು ಅಪರಾಧಿ ಕೃತ್ಯಗಳು ನಡೆಯುತ್ತಿವೆ. ಇಲ್ಲೊಬ್ಬ ಯುವಕ ತಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ ಯುವತಿಯ ರೂಮಿನಲ್ಲಿ ಸ್ಪೈಕ್ಯಾಮೆರಾ(Hidden Spy Cameras) ಅಳವಿಡಿಸಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ಶಕರ್ ಪುರದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಮೂಲದ ಯುವತಿ ಯುಪಿಎಸ್ ಸಿ(UPSC) ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ. ಹೀಗಾಗಿ ದೆಹಲಿಯಲ್ಲಿ ಮನೆ ಬಾಡಿಗೆ ಪಡೆದು ಒಂಟಿಯಾಗಿ ವಾಸಿಸುತ್ತಿದ್ದಳು.
ಬಾಡಿಗೆ ಮನೆಯ ಮಾಲೀಕನ ಮಗ ಕರಣ್ ಎಂಬಾತ, ಯುವತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮಲಗುವ ಕೋಣೆ ಹಾಗೂ ಬಾತ್ ರೂಂನಲ್ಲಿರುವ(Bathroom and Bedroom) ಬಲ್ಬ್ ಗಳಲ್ಲಿ ಸ್ಪೈಕ್ಯಾಮೆರಾ ಅಳವಿಡಿಸಿದ್ದಾನೆ. ಇತ್ತೀಚೆಗೆ ಯುವತಿ ಊರಿಗೆ ಹೋದಾಗ ಕರಣ್ ಕೈಯಲ್ಲಿ ಮನೆ ಕೀಲಿ ಕೊಟ್ಟು ಹೋಗಿದ್ದಳು. ಆಕೆಯ ಮೊಬೈಲ್ ಗೆ ತನ್ನ ಬಂದ ಲಿಂಕ್ ನೋಡಿದಾಗ ಅಪರಿಚಿತರ ಲ್ಯಾಪ್ ಟಾಪ್ ಅನ್ನು ನೋಡಿದ್ದಾಗಿ ತಿಳಿಸಿದ್ದಾಳೆ. ಆಗ ಆಕೆಗೆ ತನ್ನನ್ನು ಯಾರೋ ಗಮನಿಸುತ್ತಿದ್ದಾರೆ ಎನ್ನುವ ಸಂಶಯ ಬಂದಿದೆ. ದೆಹಲಿಗೆ ಬಂದ ಬಳಿಕ ಮನೆಯಲ್ಲಿ ಹುಡುಕಾಟ ನಡೆಸಿದ್ದಾಳೆ. ಆಗ ಬಲ್ಬ್ ನಲ್ಲಿ ಸ್ಪೈಕ್ಯಾಮೆರಾ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.
ಪೊಲೀಸರು ಬಂದು ಮನೆ ಹುಡುಕಿದಾಗ ಬೆಡ್ ರೂಮಿನಲ್ಲಿರುವ ಬಲ್ಬ್ ನಲ್ಲಿಯೂ ಸ್ಪೈಕ್ಯಾಮೆರಾ ಪತ್ತೆಯಾಗಿದೆ. ಮನೆಗೆ ಯಾರಾದರೂ ಬಂದು ಹೋಗುತ್ತಿದ್ದರೆ ಎಂದು ಕೇಳಿದ್ದಾರೆ. ಯಾರು ಬರುತ್ತಿರಲಿಲ್ಲ. ನಾನು ಊರಿಗೆ ಹೋಗುವಾಗ ಮನೆ ಕೀಯನ್ನು ಮಾಲೀಕರ ಮಗನ ಕೈಯಲ್ಲಿ ಕೊಟ್ಟು ಹೋಗಿದ್ದೆ ಎಂದು ಹೇಳಿದ್ದಾಳೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಮಾರುಕಟ್ಟೆಯಲ್ಲಿ ಸಾಮನ್ಯವಾಗಿ ಸಿಗುವ ಸ್ಪೈಕ್ಯಾಮೆರಾ ಖರೀದಿಸಿದ್ದಾನೆ. ಈ ಕ್ಯಾಮೆರಾಗಳು ಆನ್ಲೈನ್ ಮೂಲಕ ವರ್ಕ್ ಆಗುವುದಿಲ್ಲ. ಅದರಲ್ಲಿ ರೆಕಾರ್ಡ್ ಆಗುತ್ತಿದ್ದ ವಿಡಿಯೋಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಳ್ಳುತ್ತಿದ್ದ. ಹೀಗಾಗಿ ಆಗಾಗ ಮನೆಗೆ ವಿದ್ಯುತ್ ರಿಪೇರಿ ನೆಪದಲ್ಲಿ ಬರುತ್ತಿದ್ದ ಎನ್ನುವುದು ತಿಳಿದು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಭಾರತೀಯ ನ್ಯಾಯ ಸಂಹಿತೆ(Bharatiya Nyay Sanhita) 77ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.