ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ 6 ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ಶರಣಾಗತಿಯಾಗಿದ್ದಾರೆ. ಈ ಬಗ್ಗೆ ಪರ, ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಈ ಸಂಬಂಧ ಶುಕ್ರವಾರ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಶರಣಾಗತರಾದ 6 ನಕ್ಸಲರು ಕೊನೆಯವರು. ಹೊರಗಿನಿಂದ ಬಂದರೆ ನಿಗಾವಹಿಸಲಾಗುವುದು ಎಂದಿದ್ದಾರೆ.
ನಕ್ಸಲರು ಅಡಗಿಸಿಟ್ಟಿರುವ ಶಸ್ತ್ರಾಸ್ತ್ರಗಳ ಪತ್ತೆ ಮಾಡುತ್ತೇವೆ. ಅವರ ನೆರವು ಪಡೆದು ಅವುಗಳನ್ನು ವಶಕ್ಕೆ ಪಡೆಯುತ್ತೇವೆ. ಇದಕ್ಕೆಲ್ಲ ಒಂದು ಪ್ರಕ್ರಿಯೆ ಇದೆ. ಪೊಲೀಸರು ಅದನ್ನು ಮಾಡುತ್ತಾರೆ. ಸರ್ಕಾರ ನಡೆಸಿರುವ ಬಿಜೆಪಿಯವರಿಗೆ ಇದೆಲ್ಲವೂ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಇನ್ನು ನಕ್ಸಲ್ ರವೀಂದ್ರ ನಾಪತ್ತೆ ವಿಚಾರಕ್ಕೆ ಮಾತನಾಡಿ, ಶರಣಾಗಿರುವವರು ಗುಂಪಿನಿಂದ ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಅನ್ನೋದು ತಿಳಿದಿಲ್ಲ. ಈ ಕುರಿತು ತನಿಖೆ ನಡೆದಿದೆ. ಎನ್ ಕೌಂಟರ್ ನಲ್ಲಿ ಬಲಿಯಾದ ವಿಕ್ರಂಗೌಡ ಪ್ರಕರಣ ಬೇರೆ. ಇದು ಬೇರೆ. ಅವನ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.