ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಗುತ್ತಿಗೆದಾರ ಶಿವಾನಂದ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ನಾಗರಾಜ ಸವದತ್ತಿ ಹಾಗೂ ಅಶ್ರಫ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂದು ಬೆಳಗಿನಜಾವ ಆರೋಪಿಗಳನ್ನು ಬಂಧಿಸಲಾಗಿದೆ.
ತಾಲೂಕಿನ ಚಿಕ್ಕಾಂಶಿ ಹೊಸೂರಿನಲ್ಲಿ ಆರೋಪಿಗಳು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಅಲ್ಲಿಗೆ ತೆರಳಿದ ಪೊಲೀಸರು ಅವರನ್ನು ಬಂಧಿಸಿ ಕರೆದುಕೊಂಡು ಹೋಗುವಾಗ, ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಆಗ ಎಚ್ಚರಿಕೆ ನೀಡಿದರೂ ಹಲ್ಲೆಗೆ ಯತ್ನಿಸಿದ್ದಾರೆ. ಹೀಗಾಗಿ ಪಿಎಸ್ಐಗಳು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಕೊಲೆ ಪ್ರಕರಣ ಸಂಬಂಧ ಐವರ ವಿರುದ್ಧ ಕೇಸ್ ದಾಖಲಾಗಿದೆ. ಮೊನ್ನೆ ತಡರಾತ್ರಿ ಆರೋಪಿ ನಾಗರಾಜ ಮನೆಗೆ ಬೆಂಕಿ ಹಚ್ಚಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಆಸ್ತಿ ವಿಚಾರಕ್ಕೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ತನಿಖೆ ನಡೆದಿದೆ.