ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನ ಪರಿಷತ್ತಿನ ಉಗಮ, ನಡೆದು ಬಂದ ಹಾದಿ ಹಾಗೂ ಇತಿಹಾಸದ ನಡೆಯ ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ ಬಿಡುಗಡೆಗೊಳಿಸಿದರು. ವಿಕಾಸ ಸೌಧದ ಸಮ್ಮೇಳನ ಸಭಾಂಗಣದ ಕೊಠಡಿ ಸಂಖ್ಯೆ 419ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ವಿಧಾನ ಪರಿಷತ್ ಒಂದು ಕಾಲದಲ್ಲಿ ಜ್ಞಾನಿಗಳ ತಾಣವಾಗಿತ್ತು. ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗದೆ ಈ ಹಿಂದೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದರು. ಇಂದು ಇಂತಹ ವಾತಾವರಣ ಇಲ್ಲ. ಮಹಿಳಾ ಸದಸ್ಯೆ ಸಭಾಪತಿ ಆಗಬೇಕು. ಆಗ ಸದನದ ಇತಿಹಾಸ ಪರಿಪೂರ್ಣವಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಈ ಸಾಕ್ಷ್ಯಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಸಂಶೋಧನೆ ಮಾಡುವವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎಲ್ಲ ಮಾಹಿತಿಯನ್ನು ಒಳಗೊಂಡಿರುವ ಸಾಕ್ಷ್ಯಚಿತ್ರವನ್ನು ಅತ್ಯಂತ ತಾಳ್ಮೆಯಿಂದ, ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಧಾನ ಪರಿಷತ್ತಿನ ಸಮಗ್ರ ಮಾಹಿತಿ ಇದರಲ್ಲಿದೆ. ನಿರ್ದೇಶಕ ಚಂದ್ರಕಾಂತ ಸೊನ್ನದ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ ಹೇಳಿದರು.
ಈ ವೇಳೆ ಸಾಕ್ಷ್ಯಚಿತ್ರ ನಿರ್ದೇಶಕ ಚಂದ್ರಕಾಂತ ಸೊನ್ನದ ಅವರನ್ನು ಗೌರವಿಸಲಾಯಿತು. ಪರಿಷತ್ ಸಭಾ ನಾಯಕರಾದ ಸಚಿವ ಎನ್.ಎಸ್ ಬೋಸರಾಜ್, ಮಾಜಿ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಯು.ಬಿ ವೆಂಕಟೇಶ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.