ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ(MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ಸಂಪುಟದ ಸಹದ್ಯೋಗಿಗಳು, ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ. ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಭವನವು ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿದ್ದಾರೆ ಎಂದು ಸಚಿವ ಎಂ.ಬಿ(M.B Patil) ಪಾಟೀಲ ಕಿಡಿ ಕಾರಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಎಂಟು ಹತ್ತು ತಿಂಗಳಾಯ್ತು. ಅವುಗಳನ್ನು ಬಿಟ್ಟಿರುವ ಅವರು ಸತ್ಯವಿಲ್ಲದ ಮುಡಾ ಪ್ರಕರಣದಲ್ಲಿ ಅನುಮತಿ ನೀಡಿದ್ದಾರೆ ಅಂತಾ ಹೇಳಿದರು.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್(priyank kharge) ಖರ್ಗೆ ಅವರು, ರಾಜ್ಯಪಾಲರ ನಿರ್ಧಾರದ ಹಿಂದೆ ಕೇಂದ್ರದ ಕೈವಾಡವಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಇದರ ಉದ್ದೇಶ. ಹೀಗಾಗಿ ರಾಜಭವನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಏನೇ ಪ್ರಯತ್ನ ಮಾಡಿದರು. ನಾವು ಸಂವಿಧಾನಪರ ನಿಲ್ಲುತ್ತೇವೆ ಎಂದಿದ್ದಾರೆ. ಈ ಪ್ರಕರಣವೊಂದು ಷಡ್ಯಂತ್ರ ಅನ್ನೋದು ನಮಗೆ ಮೊದಲೇ ಗೊತ್ತಿತ್ತು. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಈಗ ರಾಜಭವನ ಬಿಜೆಪಿ ಕಚೇರಿ ಮಾಡಿಕೊಂಡಿದೆ ಎಂದು ಸಚಿವ ದಿನೇಶ್(dinesh gundu rao) ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅನ್ನೋದು ಇದು ತೋರಿಸುತ್ತೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ಇದನ್ನು ಎದುರಿಸಿ ನಾವು ಜಯ ಸಾಧಿಸುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟ್ ವರ್ತಿಸುತ್ತಿದ್ದಾರೆ ಎಂದು ಸಚಿವ ಈಶ್ವರ್(eshwar khandre) ಖಂಡ್ರೆ ಕಿಡಿ ಕಾರಿದ್ದಾರೆ. ರಾಜಕೀಯ ದ್ವೇಷ, ಒತ್ತಡಕ್ಕೆ ಮಣಿದು ಬಿಜೆಪಿಯ ರಾಜಕೀಯ ಪ್ರೇರಿತ ಆರೋಪದ ಆಧಾರದ ಮೇಲೆ ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿರುವುದು ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಎಂದಿದ್ದಾರೆ.
ರಾಜಕೀಯವಾಗಿ ಇದನ್ನು ಮಾಡಲಾಗುತ್ತಿದೆ. ಅದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಬಿಜೆಪಿಯೇತರ ಯಾವುದೇ ಸರ್ಕಾರ ಬಂದರೂ ಈ ರೀತಿ ಕಾಡಿಸಲಾಗುತ್ತಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅದರ ವರದಿ ಇನ್ನು ಬಂದಿಲ್ಲ. ಅದಾಗಲೇ ರಾಜ್ಯಪಾಲರು ತಮ್ಮ ಸಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಚಿವೆ ಲಕ್ಷ್ಮಿ(lakshmi hebbalkar) ಹೆಬ್ಬಾಳ್ಕರ್ ಹೇಳಿದ್ದಾರೆ. ರಾಜ್ಯದ ಜನತೆ, ಶಾಸಕರು, ಸಚಿವರು ಎಲ್ಲರೂ ಸಿಎಂ ಬೆನ್ನಿಗೆ ಇದ್ದೇವೆ. ಇದನ್ನು ರಾಜಕೀಯವಾಗಿಯೂ, ಕಾನೂನಾತ್ಮಕವಾಗಿಯೂ ಹೋರಾಟ ಮಾಡುತ್ತೇವೆ. ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲವೆಂದರು.