ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿನ ಸರ್ವೇ ನಂಬರ್ 1029ರಲ್ಲಿರುವ ಖಬ್ರಸ್ಥಾನ ಜಾಗ ಖಬ್ರಸ್ಥಾನಕ್ಕೆ ಉಪಯೋಗಿಸಬೇಕೆಂದು ಆಗ್ರಹಿಸಿ, ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸಮಿತಿಯವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪದಾಧಿಕಾರಿಗಳು, ನಕಲಿ ಕಮಿಟಿಯವರು ಸರ್ವೇ ನಂಬರ್ 1029ಕ್ಕೆ ಏನು ಸಂಬಂಧ ಎಂದು ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ದಸ್ತಗೀರ ಮುಲ್ಲಾ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಖಬ್ರಸ್ಥಾನದ ಜಾಗ ಎಂದು ದಾಖಲೆಯಲ್ಲಿ ಇದ್ದರೆ ಅದು ಸ್ಮಶಾನಕ್ಕೆ ಮಾತ್ರ ಬಳಕೆಯಾಗಬೇಕು. ಅಲ್ಲಿ ಸಮಾಧಿ ಇರಲಿ ಬಿಡಲಿ. ಬೇರೆ ಯಾವುದೇ ಚಟುವಟಿಕೆ ನಡೆಸಬಾರದು. ಹೀಗಿರುವಾಗ ಇಲ್ಲಿ 380 ಅಂಗಡಿಗಳನ್ನು ನಿರ್ಮಿಸಲು ನೀಲಿನಕ್ಷೆಯನ್ನು ಸಿದ್ಧಪಡಿಸಿ, ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇಲ್ಲಿ ಕಳೆದ 30-40 ವರ್ಷಗಳಿಂದ ಗೂಡಂಗಡಿಗಳನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದವರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಇದರ ಮಾಲೀಕರು ತಾವು ಎಂದು ಬಿಂಬಿಸಿ ಅವರನ್ನು ಹತ್ತಿಕ್ಕುವಂತಹ ಕೆಲಸ ಮಾಡಿದರು. ಖಬ್ರಸ್ಥಾನ ಜಾಗ ಖಬ್ರಸ್ಥಾನ ಆಗಿಯೇ ಉಳಿಯಬೇಕು ಅನ್ನೋದು ಸುಪ್ರೀಂ ಕೋರ್ಟ್ ಆದೇಶ. ಆದರೆ, ಇವರು ಮತ್ತೆ ಇಲ್ಲಿ ಅನಧಿಕೃತ ಮಳಿಗೆಗಳನ್ನು ನಿರ್ಮಿಸಲು ಹೊರಟಿದ್ದಾರೆ. ವಕ್ಫ್ ಬೋರ್ಡ್ ಇವರಿಗೆ ಕಮಿಟಿ ಮಾಡಿ ಕೊಟ್ಟಿದ್ದು ಸರ್ವೇ ನಂಬರ್ 834 ಹಾಗೂ 1020ರಲ್ಲಿ ನಿರ್ವಹಣೆ ಮಾಡಲು. ಆದರೆ, ಸರ್ವೇ 1029ರಲ್ಲಿ ಶೆಡ್ ನಿರ್ಮಿಸಲು ಪರವಾನಿಗೆ ಕೊಟ್ಟಿದ್ದು ಯಾರು? ಇದೊಂದು ನಕಲಿ, ಬೋಗಸ್ ಕಮಿಟಿ. ಗೆಜೆಟ್ ನಲ್ಲಿನ ಫಾರ್ಮ್ ನಂಬರ್ 42ನಲ್ಲಿ ಸರ್ವೇ ನಂಬರ್ 1020 ಇರುವುದನ್ನು 1029 ಎಂದು ನೀವು ತಿದ್ದಿದ್ದೀರಿ. ಇದರ ದಾಖಲೆಗಳನ್ನು ಕೊಡುತ್ತೇವೆ. ಸಿರಿಯಲ್ ನಂಬರ್ 96ರಲ್ಲಿ ಸರ್ವೇ ನಂಬರ್ 1029 ಇದ್ದರೆ ನಾವು ಹೋರಾಟ ಕೈ ಬಿಡುತ್ತೇವೆ ಎಂದರು.

ಮುಸ್ಲಿಂ ಖಬ್ರಸ್ಥಾನ ಕಮಿಟಿ ಸಿಂದಗಿ ಎಂದು ಹೇಳಿ ಕೊಟ್ಟಿರುವ ಸ್ವಯಂ ಘೋಷಣಾ ಪತ್ರದಲ್ಲಿ ಈ ಕಮಿಟಿ ಆಡಳಿತ ಮಂಡಳಿಯ ಸದಸ್ಯರ ಪೈಕಿ ಯಾರ ಮೇಲೆ ಅಪರಾಧ ಪ್ರಕರಣಗಳಿಲ್ಲ. ವಕ್ಫ್ ಸಂಸ್ಥೆಯ ಬಾಡಿಗೆದಾರರಿಲ್ಲ, ಕಬ್ಜಾದಾರರಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಸದಸ್ಯರ ಮೇಲೆ ಅಪಾರಧ ಪ್ರಕರಣಗಳು ಇರುವ ಎಫ್ಐಆರ್ ದಾಖಲೆಗಳನ್ನು ನಾವು ಕೊಡುತ್ತೇವೆ. ನಿಮಗೆ ಧಮ್ಮು, ತಾಕತ್ತು ಇದ್ದರೆ ನೀವು ಜನರಿಗೆ ಏನು ಹೇಳಲು ಹೊರಟಿದ್ದೀರಿ ಅದನ್ನು ಸತ್ಯ ಎಂದು ಸಾಬೀತು ಪಡಿಸಿ ಎಂದು ದಸ್ತಗೀರ ಮುಲ್ಲಾ ಅವರು ಸವಾಲು ಹಾಕಿದರು.
ಈ ವೇಳೆ ಮಾತನಾಡಿದ ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಸದಸ್ಯ ರಹೀಮ್ ದುದನಿ ಅವರು, ತಮ್ಮ ವಿರುದ್ಧ ಕೇಳಿ ಬಂದಿರುವ 3 ಲಕ್ಷ ರೂಪಾಯಿ ವಸೂಲಿ ಆರೋಪನ್ನು ಅಲ್ಲಗಳೆದರು. ಇದು ಸತ್ಯಕ್ಕೆ ದೂರವಾದದ್ದು. ಇದನ್ನು ಅವರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರಿಗೆ ನಾನು ನೋಟಿಸ್ ಕಳಿಸುತ್ತೇನೆ ಎಂದರು. ಮಹಿಬೂಬ್ ಸಿಂದಗಿಕರ್ ಮಾತನಾಡಿ, ಕೆಲ 11 ಜನರು ಖಬ್ರಸ್ಥಾನ ಕಮಿಟಿ ಮಾಡಿಕೊಂಡು ಬಂದಿದ್ದಾರೆ. ಇದು ಸಿಂದಗಿಯಲ್ಲಿನ ಮುಸ್ಲಿಂ ಸಮುದಾಯದ ಗಮನಕ್ಕೆ ತರದೆ ಕಳ್ಳತನದಿಂದ ಮಾಡಿಕೊಂಡು ಬಂದಿದ್ದು ಯಾಕೆ ಅನ್ನೋದು ಹೇಳಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಸಮಿತಿ ಉಪಾಧ್ಯಕ್ಷ ಯಾಕೂಬ್ ನಾಟೀಕಾರ, ಅಬ್ದುಲ್ ರಜಾಕ್ ದುದನಿ, ತಾಲೀಬ್ ಗುಂದಗಿ, ಅಬ್ದುಲ್ ರಜಾಕ್ ಸಿಂದಗಿಕರ್, ಜಾಫರ್ ಇನಾಮದಾರ್, ಮಹಿಬೂಬ್ ಹಸರಗುಂದಗಿ, ಅಸ್ಪಾಕ್ ಕರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.