ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆ ಇಬ್ಬರು ಅಕ್ಕ ತಂಗಿಗೆ ಮದುವೆಯಾಗಿದೆ. ಒಂದೊಂದು ಮಗುವಿದೆ. ಅಣ್ಣ-ತಮ್ಮನಿಗೆ ಅಕ್ಕ-ತಂಗಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಆದರೆ, ಪತಿಯ ಸ್ನೇಹಿತನೊಂದಿಗೆ ಸಲುಗೆ ಬೆಳೆಸಿಕೊಂಡು ಈಗ ಗಂಡನ ಸಾವಿನ ತನಕ ಬಂದಿದೆ. ಇನ್ನೊಬ್ಬ ಗಾಯಗೊಂಡಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ಅಭಿಷೇಕ್(36) ಎನ್ನುವ ಯುವಕ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾನೆ.
ಅಭಿಷೇಕ್ ಹಾಗೂ ಅವಿನಾಶ್ ಎನ್ನುವ ಸಹೋದರರು ಹಾಸನ ಜಿಲ್ಲೆಯ ಹಿರಿಸಾವೆ ಮೂಲದ ಸಹೋದರಿಯರನ್ನು ಮದುವೆಯಾಗಿದ್ದಾರೆ. ಅಭಿಷೇಕ್ ನ ಪರಿಚಯಸ್ಥ ಕಾರ್ತಿಕನ ಜೊತೆಗೆ ಇವರಿಗೆ ಪರಿಚಯವಾಗಿದೆ. ಆಗಾಗ ಮನೆಗೆ ಬಂದು ಹೋಗುತ್ತಿರುವುದರಿಂದ ಸಲುಗೆ ಬೆಳೆದಿದೆ. ಫೋನ್ ನಲ್ಲಿ ಮಾತನಾಡುವುದು, ಚಾಟ್ ಮಾಡುವುದು ನಡೆದಿದೆ. ಎಂಥಾ ದುರಂತವೆಂದರೆ ಅಕ್ಕ, ತಂಗಿ ಇಬ್ಬರೂ ಈ ಕಾರ್ತಿಕನೊಂದಿಗೆ ಸಲುಗೆ ಬೆಳೆಸಿದ್ದಾರೆ. ಇದು ಅಭಿಷೇಕಗೆ ಗೊತ್ತಾಗಿ ಬುದ್ದಿವಾದ ಹೇಳಿದ್ದಾನೆ. ಮುಂದೆ ಅಕ್ಕ, ತಂಗಿ ಇಬ್ಬರು ಗಂಡಂದಿರಿಂದ ದೂರವಾಗಿದ್ದಾರೆ.
ನವೆಂಬರ್ 27ರ ರಾತ್ರಿ 8 ಗಂಟೆಯ ಸುಮಾರಿಗೆ ಗ್ಯಾಡರಹಳ್ಳಿಯ ಅನುಪಮಾ ಶಾಲೆಯ ಹತ್ತಿರ ಅಭಿಷೇಕ್ ಕಾರ್ತಿಕನನ್ನು ಭೇಟಿಯಾಗಿದ್ದ. ಈ ವೇಳೆ ಪತ್ನಿ ಹಾಗೂ ನಾಂದನಿ ಅವನ ಜೊತೆಯೇ ಇದ್ದರಂತೆ. ಆಗ ಜಗಳವಾಗಿದೆ. ಮಾತಿಗೆ ಮಾತು ಬೆಳದಿದೆ. ಆಗ ಕಾರ್ತಿಕ್ ಹಾಗೂ ಆತನ ಸಹಚರ ಚೇತನ್ ಎಂಬಾತ ಕಡಗದಿಂದ ಅಭಿಷೇಕ್ ಮೇಲೆ ಮನಸೋಇಚ್ಛೆ ಥಳಿಸಿದ್ದಾರೆ. ವಿಷಯ ತಿಳಿದು ಸಹೋದರ ಅವಿನಾಶ್ ಸ್ಥಳಕ್ಕೆ ಬಂದಿದ್ದಾನೆ. ಅವನ ಮೇಲೆಯೂ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅಭಿಷೇಕನನ್ನು ವಿಕ್ಟೋರಿಯೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಕಾರ್ತಿಕ್, ಚೇತನನ್ನು ಬಂಧಿಸಲಾಗಿದ್ದು, ಇಷ್ಟಕ್ಕೆಲ್ಲ ಕಾರಣರಾದ ಅಕ್ಕ, ತಂಗಿಗೆ ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸಲಿದ್ದಾರೆಂದು ತಿಳಿದು ಬಂದಿದೆ.