ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿನ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಕವಿಗಳಾದ ರಾಚು ಕೊಪ್ಪ ಅವರು ಬರೆದ ಸಾಲುಮರದ ತಿಮ್ಮಕ್ಕ ಕವಿತೆ ಇಲ್ಲಿದೆ.
ಸಾಲು ಮರದ ತಿಮ್ಮಕ್ಕ
ಉಳಿಯಿತು ನಿನ್ನ ಹೆಸರಕ್ಕ,
ಗಿಡವನು ನೆಟ್ಟು ಹಸಿರನು ಕೊಟ್ಟು
ಬಾಳಿಗೆ ಕೊಟ್ಟೆ ಗಂಧದ ಚೌಕಟ್ಟು.
ಬಡತನ ಕಂಡೆ ಗಂಜಿಯು ಕುಡಿದೆ
ಬಂಜೆಯ ನೋವನೂ ಉಂಡೆ,
ಸಹಿಸಿತು ಮನಸು ಎಲ್ಲವು ಸೋಸಿ
ಸೋಲದೆ ಗೆದ್ದೆ ನೀ, ಸಕಲವು ಸಹಿಸಿ.
ಸ್ವರ್ಗವೂ ಇಲ್ಲೆ,ನರಕವೂ ಇಲ್ಲೆ
ತೋರಿದ ಧೀರಳು ನೀ,ಭುವಿಯಲ್ಲೆ;
ಮಕ್ಕಳು ಇಲ್ಲದ ನೋವನು ಮರೆತೆ
ಮರಗಳ ನೆಟ್ಟು ಪೊರೆದ ಸಂಪ್ರೀತೆ.
ತಾಯಿಯ ಪ್ರೀತಿಗೆ ಮೇರೆಯೆ ಇಲ್ಲ
ಎಂತಲೆ ಬೆಳೆದವು ಆಲದ ಮರಗಳು
ಉಸಿರನು ಕೊಟ್ಟು ಹಸಿರನು ತೊಡಲು
ಉಲಿದವು ಚಿಲಿಪಿಲಿ ಎಂದು ಹಕ್ಕಿಗಳು.
ವೃಕ್ಷಮಾತೆ ಪರಮ ಪಾವನ ಪುನೀತೆ
ಸಾಲುಮರದ ವನಿತೆ, ನೀ ಅಭಿಜಾತೆ
ಪದ್ಮಶ್ರೀ ಪಡೆದ ಸ್ತ್ರೀಕುಲ ಸಂಜಾತೆ
ನಿತ್ಯವೂ ಸ್ಮರಿಸುವೆ ನಿನ್ನಮರ ಚರಿತೆ.




