ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿನ್ನ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಆಗುತ್ತಿದೆ. ಯಾಕೆಂದರೆ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗಿ, ಇದೀಗ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಾಟಿದೆ. ಹಳದಿ ಲೋಹದ ಮೋಹ ಹೊಂದಿದವರಿಗೆ ಬಿಗ್ ಶಾಕ್ ಕೊಟ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ 1 ಲಕ್ಷದ 1 ಸಾವಿರದ 135 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 92,900 ಆಗಿದೆ. ಹೀಗಿದ್ದರೂ ಬಂಗಾರದ ಮೇಲೆ ಮೋಹ ಕಡಿಮೆಯಾಗಿಲ್ಲವೆಂದೆ ಹೇಳಬೇಕು.
ನಾಲ್ಕೈದು ತೊಲೆ ಚಿನ್ನದ ಬೆಲೆಯಲ್ಲಿ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಲ್ಲಿ ಒಂದು ಸೈಟ್ ಖರೀದಿ ಮಾಡಬಹುದು. ಇದೀಗ ಮದುವೆ ಸೇರಿದಂತೆ ಶುಭ ಸಮಾರಂಭಗಳ ಭರಾಟೆ ಜೋರು. ಎಲ್ಲದರ ಬೆಲೆ ದುಪ್ಪಟ್ಟಾಗಿದೆ. ಪದ್ಧತಿ, ಸಂಪ್ರದಾಯ ಎಂದು ಬಂಗಾರ ಖರೀದಿಸಲೇಬೇಕು ಎನ್ನುತ್ತಾ ಹೋಗುವವರು ಕೈ ಕೈ ಹಿಸುಕಿಕೊಳ್ಳಬೇಕಾಗಿದೆ. ಕಳೆದ ಒಂದೂವರೆ ದಶಕದಲ್ಲಿ ಚಿನ್ನದ ದರ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿರುವುದು ನೋಡಿದರೆ ಸಾಮಾನ್ಯ ಜನರು ಬಂಗಾರು ಖರೀದಿಸುವುದು ದೂರದ ಮಾತಾಗಿದೆ.