Ad imageAd image

ಶಾಂತಿ ನೆಲೆಸಲು ಅಹಿಂಸಾ ತತ್ವ ಅನಿವಾರ್ಯ: ಸಚಿವ ಡಿ.ಸುಧಾಕರ

Nagesh Talawar
ಶಾಂತಿ ನೆಲೆಸಲು ಅಹಿಂಸಾ ತತ್ವ ಅನಿವಾರ್ಯ: ಸಚಿವ ಡಿ.ಸುಧಾಕರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ವರ್ತಮಾನದ ಸಂಘರ್ಷಮಯ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಲು ಅಹಿಂಸಾ ತತ್ವವನ್ನು ಪಾಲನೆ ಮಾಡುವುದು ಅನಿವಾರ್ಯ ಎಂದು ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಹೇಳಿದರು. ಇಲ್ಲಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಭಗವಾನ್ ಪಾರ್ಶ್ವನಾಥರ(Bhagwan Parshwanath) ಕೇವಲಜ್ಞಾನ ಕಲ್ಯಾಣಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಲ್ಯಾಣ ಮತ್ತು ಅಸ್ತಿತ್ವದ ಉಳಿವಿಗೆ ಜೈನಧರ್ಮದ ಪರಮ ತತ್ವವಾದ ಅಹಿಂಸೆಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವುದು ಅವಶ್ಯಕವಾಗಿದೆ. ಭಾರತದ ತಳಹದಿಯೇ ಧರ್ಮದ ಮೇಲೆ ನಿಂತಿದೆ. ದೇಶದಲ್ಲಿ ಜೈನ ಧರ್ಮವು ಅತಿ ಪುರಾತನವಾದುದು. ಅದರ ಮೂಲತತ್ವ ಅಹಿಂಸೆಯನ್ನು ಎಲ್ಲ ಧರ್ಮಗಳೂ ಅಂಗೀಕರಿಸಿವೆ. ಭಾರತೀಯರು ಅಹಿಂಸಾ ತತ್ವವನ್ನು ಉಳಿಸಿ-ಬೆಳೆಸಿ ತಮ್ಮದನ್ನಾಗಿಸಿಕೊಳ್ಳಬೇಕು. ಜತೆಗೆ ಇನ್ನೊಬ್ಬರಿಗೂ ತಿಳಿಹೇಳಬೇಕು ಎಂದರು. ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಗುಣಧರ ನಂದಿ ಮಹಾರಾಜರು ನಿರ್ಮಿಸಿರುವ ಪ್ರಪಂಚದ ಅತೀ ಎತ್ತರದ ಸುಮೇರು ಪರ್ವತವು ಕರ್ನಾಟಕದ ಹೆಮ್ಮೆಯಾಗಿದೆ. ಮುಂದಿನ ದಿನಗಳಲ್ಲಿ ಇದು ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಬೆಳೆಯಲಿದೆ. ರಾಜ್ಯದ ಎಲ್ಲ ಜೈನ ಬಸದಿಗಳು ಮತ್ತು ಮಂದಿರಗಳ ಜೀರ್ಣೋದ್ಧಾರಕ್ಕೆ ರಾಜ್ಯ ಸರಕಾರವು ಈಗಾಗಲೇ ೫೦ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆಯಿದೆ ಎಂದರು.

ಅತಿಥಿಯಾಗಿ ದೆಹಲಿಯ ಆಯುಷ್ ಮಂತ್ರಾಲಯದ ಮೆಡಿಕಲ್ ಅಸೆಸ್ಮೆಂಟ್ ಆ್ಯಂಡ್ ರೇಟಿಂಗ್ ಬೋರ್ಡ್ ಅಧ್ಯಕ್ಷ ಹಾಗೂ ಕನ್ನಡಿಗ ರಘುರಾಮ ಭಟ್ ಮಾತನಾಡಿ, ಜೈನ ಧರ್ಮ ಸೇರಿದಂತೆ ಭಾರತದ ಎಲ್ಲ ಧರ್ಮ, ದರ್ಶನ ಮತ್ತು ಶಾಸ್ತ್ರಗಳ ಪರಮೋದ್ದೇಶವೇ ಮೋಕ್ಷ ಸಾಸುವುದು. ಆಚಾರ್ಯ ಗುಣಧರ ನಂದಿ ಮಹಾರಾಜರು ಸುಮೇರು ಪರ್ವತ ನಿರ್ಮಾಣ, ಧಾರ್ಮಿಕ ಉತ್ಸವಗಳ ಮೂಲಕ ಜನರನ್ನು ಧಾರ್ಮಿಕ ಪ್ರವೃತ್ತಿಯತ್ತ ಪ್ರೇರೇಪಿಸುತ್ತಿರುವುದು ಶ್ಲಾಘನೀಯ ಎಂದರು.

ಗುಣಧರ ನಂದಿ ಮಹಾರಾಜರು ವರೂರು ಮತ್ತು ಜಮಖಂಡಿಗಳಲ್ಲಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಡೆಸುತ್ತಿದ್ದು, ಭಾರತದ ಪಾರಂಪರಿಕ ಜ್ಞಾನವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಆಯುರ್ವೇದ ಮತ್ತು ಯೋಗಮಾರ್ಗಗಳು ರೋಗ ಬರದಂತೆ ತಡೆಯುವುದು, ಚಿಕಿತ್ಸೆಗೆ ಹೆಸರಾಗಿದೆ. ಅದನ್ನು ಇಡೀ ಪ್ರಪಂಚವೇ ಒಪ್ಪಿಕೊಂಡಿವೆ. ವರೂರು ಕ್ಷೇತ್ರದಲ್ಲಿರುವ ಆಯುರ್ವೇದ ಆಸ್ಪತ್ರೆ ಮತ್ತು ಚಿಕಿತ್ಸೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು ಎಂದರು. ನ್ಯಾಯಮೂರ್ತಿ ಪದ್ಮರಾಜ ದೇಸಾಯಿ, ಮಹಾವೀರ ಮಿರಜಗಿ, ಪ್ರಮೋದ ಜೈನ, ಕೇಶವ ಜೈನ ಮೊದಲಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article