ಪ್ರಜಾಸ್ತ್ರ ಸುದ್ದಿ
ಆಲಮೇಲ(Alamela): ಪಟ್ಟಣದ ಪ್ರಸಿದ್ಧ ಹಜರತ್ ಪೀರ್ ಗಾಲಿಬ್ ಸಾಹೇಬ್ ದರ್ಗಾಕ್ಕೆ ಹೋಗುವ ರಸ್ತೆಯ ಸಲುವಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕಳೆದ 12 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ನಿತ್ಯ ಒಂದಲ್ಲ ಒಂದು ರೀತಿಯ ವಿಭಿನ್ನ ಪ್ರತಿಭಟನೆ ಮಾಡುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದರು. ಪ್ರತಿಭಟನಾ ನಿರತರನ್ನು ಭೇಟಿಯಾದ ಶಾಸಕ ಅಶೋಕ ಮನಗೂಳಿ, ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಹೋರಾಟಗಾರರೊಂದಿಗೆ ಮಾತನಾಡಿ, ಮುಂದಿನ ದಿನಗಳಲ್ಲಿ ದರ್ಗಾಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ರಸ್ತೆ ನಿರ್ಮಿಸಿಕೊಡುವುದಾಗಿ ಹೇಳಿ, ಅವರ ಮನವೊಲಿಸುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಿದರು. ಈ ವೇಳೆ ಸಿಹಿ ತಿನಿಸುವ ಮೂಲಕ ಸಂಭ್ರಮಿಸಲಾಯಿತು. ಪಟ್ಟಣ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಹಶೀಲ್ದಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.