ಪ್ರಜಾಸ್ತ್ರ ವಿಶೇಷ
ಸಿಂದಗಿ(Sindagi): ತಾಲೂಕಿನ ಪ್ರತಿ ಗ್ರಾಮದಲ್ಲಿ ಜೆಜೆಎಂ ಕೆಲಸ ನಡೆಯುತ್ತಿದೆ. ಇದರ ಕಾಮಗಾರಿಯಿಂದ ಜನರಿಗೆ ಉಪಯೋಗದ ಜೊತೆಗೆ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಅದರಲ್ಲಿ ಬಹುಮುಖ್ಯವಾಗಿ ಇರುವ ಅಲ್ಪಸ್ವಲ್ಪ ರಸ್ತೆಯೂ ಸಂಪೂರ್ಣ ಹಾಳಾಗಿ ಹೋಗುತ್ತಿವೆ. ಈಗ ಮಳೆಗಾಲವಾಗಿರುವುದರಿಂದ ಸ್ವಲ್ಪ ಮಳೆ ಬಂದರೂ ಊರು ತುಂಬಾ ರಾಡಿಯಾಗಿ ತಿರುಗಾಡಲು ಬರದಂತಾಗುತ್ತಿದೆ. ಇದೆಲ್ಲದಕ್ಕೂ ಸಾಕ್ಷಿಯಂಬಂತೆ ಹೊನ್ನಳ್ಳಿ ಗ್ರಾಮದಲ್ಲಿನ ಪರಿಸ್ಥಿತಿ ಇಲ್ಲಿನ ಫೋಟೋಗಳು ಹೇಳುತ್ತವೆ.
ಗ್ರಾಮದ ಪ್ರಮುಖ ರಸ್ತೆಗಳನ್ನು ಅಗೆಯಲಾಗಿದೆ. ನಂತರ ದುರಸ್ತಿ ಮಾಡಿಕೊಡುತ್ತೇವೆ ಎಂದು ಹೇಳಿದವರು ಇದುವರೆಗೂ ಮಾಡಿಲ್ಲ. ಇದರ ಪರಿಣಾಮ ಹಿರಿಯರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
‘ಜೆಜೆಎಂ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ವಾಪಸ್ ರಸ್ತೆ ದುರಸ್ತಿ ಮಾಡುತ್ತೇವೆ ಎಂದವರು ಇದುವರೆಗೂ ಮಾಡಿಲ್ಲ. ಪಿಡಿಒ ಸೇರಿ ಸಂಬಂಧಪಟ್ಟವರಿಗೆ ಹಲವು ಬಾರಿ ಹೇಳಲಾಗಿದೆ. ಆದರೂ ಕೆಲಸವಾಗಿಲ್ಲ. ಇಲ್ಲಿರುವ ಹೈಸ್ಕೂಲ್, ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ’. -ಮಷಾಕ್ ತಾಳಿಕೋಟಿ, ಗ್ರಾಮಸ್ಥರು
ರಾಜೀವ ಗಾಂಧಿ ಪ್ರೌಢಶಾಲೆ ಹಾಗೂ ಸರಸ್ವತಿ ಪ್ರಾಥಮಿಕ ಶಾಲೆಗಳಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿದೆ. ತಗ್ಗು ಗುಂಡಿಗಳಲ್ಲಿ ಕೊಳಚೆ ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿದೆ. ಇದರ ಪರಿಣಾಮ ಡೆಂಗ್ಯೂ ಭೀತಿಯೂ ಮೂಡಿದೆ. ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಕೇಳಿಕೊಳ್ಳಲಾಗುತ್ತಿದೆ.
‘ರಸ್ತೆ ಸಮಸ್ಯೆಯಿಂದಾಗಿ ಶಾಲೆ ಬರಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ನಮ್ಮಲ್ಲಿ 130 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆಗಸ್ಟ್ 15ರಂದು ಪಥ ಸಂಚಲನ ಮಾಡಬೇಕು ಎಂದುಕೊಂಡಿದ್ದೇವೆ. ರಸ್ತೆ ಸರಿಪಡಿಸಿ ಎಂದು ಪಂಚಾಯ್ತಿಯವರಿಗೆ ಹೇಳಿದ್ದೇವೆ. ಇದುವರೆಗೂ ಆಗಿಲ್ಲ. ಆದಷ್ಟು ಬೇಗ ರಿಪೇರಿಯಾದರೆ ಅನುಕೂಲವಾಗಲಿದೆ’. – ಎ.ಆರ್ ಹತ್ತಿ, ಮುಖ್ಯ ಗುರುಗಳು, ರಾಜೀವ ಗಾಂಧಿ ಪ್ರೌಢಶಾಲೆ
‘ಹಬ್ಬದ ಹಿನ್ನಲೆಯಲ್ಲಿ ಕೆಲಸಗಾರರು ಊರಿಗೆ ಹೋಗಿದ್ದಾರೆ. ರಸ್ತೆ ಸರಿಪಡಿಸಲು ಈಗಾಗ್ಲೇ ಹೇಳಲಾಗಿದೆ. ನಾಳೆ, ನಾಡಿದ್ದರಲ್ಲಿ ರಸ್ತೆ ದುರಸ್ತಿ ಕೆಲಸ ಮಾಡಲಾಗುವುದು.’ ರಾಕೇಶ ದೊಡಮನಿ, ಗುತ್ತಿಗೆದಾರರು
ಬಹುತೇಕವಾಗಿ ಎಲ್ಲಿಯೇ ಒಂದು ಕಾಮಗಾರಿ ಶುರುವಾಯ್ತು ಅಂದರೆ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತೆ. ಅದಕ್ಕೆ ಸೂಕ್ತವಾದ ವ್ಯವಸ್ಥೆ ಮಾಡುವ ಕುರಿತು ಜನಪ್ರತಿನಿಧಿಗಳು ಯೋಚಿಸುವುದೇ ಇಲ್ಲ. ಚರಂಡಿ, ನೀರು, ವಿದ್ಯುತ್, ಶೌಚಾಲಯ ಹೀಗೆ ಒಂದೊಂದು ಕಾಮಗಾರಿಗೆಂದು ರಸ್ತೆಯನ್ನು ಪದೆಪದೆ ಅಗೆಯುವುದು. ಅದರ ರಿಪೇರಿ, ಹೊಸ ರಸ್ತೆಗಾಗಿ ಮತ್ತೊಂದು ಕಾಮಗಾರಿ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಹೊನ್ನಳ್ಳಿ ಗ್ರಾಮದಲ್ಲಿ ಆಗಿರುವ ರಸ್ತೆ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹ.
ಜೆಜೆಎಂ ಕಾಮಗಾರಿ ಅರ್ಧಂಬರ್ಧ ಮಾಡಲಾಗಿದೆ. ಹೀಗಾಗಿ ರಸ್ತೆಗಳೆಲ್ಲವೂ ಹಾಳಾಗಿವೆ. 1 ಹಾಗೂ 2ನೇ ವಾರ್ಡ್ ನಲ್ಲಿ ತೀವ್ರ ಸಮಸ್ಯೆಯಾಗಿದೆ. ರೈತರು ಹೊಲಗಳಿಗೆ ಹೋಗಲು, ಮಹಿಳೆಯರು ಶೌಚಾಲಯಕ್ಕೆ ಹೋಗಲು ಸಹ ಸಮಸ್ಯೆಯಾಗುತ್ತಿದೆ. ಕೂಡಲೇ ಇದನ್ನು ಬಗೆ ಹರಿಸಬೇಕು.’ ಆನಂದ ತಳವಾರ, ತಳವಾರ ಸಮಾಜದ ಮುಖಂಡರು