ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮುಖ್ಯಮಂತ್ರಿ ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಅವರ ವಿರುದ್ಧ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತದ ಆರೋಪ ಕೇಳಿ ಬಂದಿದೆ. ಮುಡಾದಲ್ಲಿ ನಡೆದ ಹಗರಣದಲ್ಲಿ ಸಿಎಂನವರ ಪಾತ್ರವೂ ಇದೆ ಎಂದು ಆರೋಪಿಸಿ ಬಿಜೆಪಿ, ಜೆಡಿಎಸ್ ಪಾದಯಾತ್ರೆ ನಡೆಸುತ್ತಿವೆ. ಅವರಿಗೆ ಕೌಂಟರ್ ಕೊಡಲು ಕಾಂಗ್ರೆಸ್ ಜನಾಂದೋಲನ ನಡೆಸುತ್ತಿದೆ. ಇದರ ಜೊತೆಗೆ ಸಿಎಂ ತವರು ಜಿಲ್ಲೆಯಾದ ಮೈಸೂರಿನಲ್ಲಿ ಇಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜೆಪಿ ಸರ್ಕಾರದದಲ್ಲಿನ ಭ್ರಷ್ಟಾಚಾರಗಳ ವಿರುದ್ಧ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಹೀಗಾಗಿ ಎಲ್ಲೆಡೆ ಕಾಂಗ್ರೆಸ್ ನಾಯಕರ ಕಟೌಟ್ ಗಳು ರಾರಾಜಿಸುತ್ತಿವೆ. ಈಗಾಗ್ಲೇ ಕೈ ನಾಯಕರು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ವೇದಿಕೆಯನ್ನು ಪರಿಶೀಲಿಸಿದ್ದಾರೆ. ಸಿಎಂ ಬರುವುದು ಬೇಕಾಗಿರಲಿಲ್ಲ. ಬಿಜೆಪಿ, ಜೆಡಿಎಸ್ ನವರಿಗೆ ನಾವೇ ಉತ್ತರ ಕೊಡುತ್ತೇವೆ ಎಂದು ಹೇಳಿದ್ದೇವು. ಆದರೆ, ಅವರಿಗೆ ಮೈಸೂರು ತವರು ಕ್ಷೇತ್ರವಾಗಿರುವುದರಿಂದ ಭಾಗವಹಿಸುತ್ತಿದ್ದಾರೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.