ಪ್ರಜಾಸ್ತ್ರ ಸುದ್ದಿ
ಹಂಪಾಪುರ(Hampapura): ಪತಿ ನಿಧನದ ಮರುದಿನವೆ ಶಿಕ್ಷಕಿಯೊಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದು, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿ.ಬಿ ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಅವರ ಪತಿ ಕಿರಣಕುಮಾರ್(47) ಮಾರ್ಚ್ 25ರಂದು ನಿಧನರಾಗಿದ್ದಾರೆ. ಈ ದುಃಖದ ನಡುವೆಯೂ ಶಿಕ್ಷಕಿ ಜ್ಯೋತಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರುದಿನ ಶಾಲೆಗೆ ಬಂದು ಗಣಿತ ಪರೀಕ್ಷೆಯ ಪೂರ್ವ ಸಿದ್ಧತೆಯನ್ನು ಮಾಡಿಸಿದ್ದಾರೆ.
ಶಿಕ್ಷಕಿ ಜ್ಯೋತಿ ಅವರ ಕಾರ್ಯಕ್ಕೆ ಪೋಷಕರು, ಶಾಲೆಯ ಶಿಕ್ಷಕರು, ಸಾರ್ವಜನಿಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಶಾಲೆಗೆ ಬಿಇಒ ಅವರು ಭೇಟಿ ನೀಡಿ ಶಿಕ್ಷಕಿಗೆ ಸಾಂತ್ವಾನ ಹೇಳಿದರು. ಈ ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದೇನೆ. ವರ್ಷ ಪೂರ್ತಿ ಹಾಕಿದ ಶ್ರಮ ಈ ಒಂದು ದಿನದಿಂದ ಹಾಳಾಗಬಾರದು. ಮನೆಯಲ್ಲಿದ್ದರೆ ದುಃಖ ಹೆಚ್ಚಾಗುತ್ತೆ. ಹೀಗಾಗಿ ಶಾಲೆಗೆ ಬಂದೆ ಎಂದು ಶಿಕ್ಷಕಿ ಜ್ಯೋತಿ ಹೇಳಿದ್ದಾರೆ.




