ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಸಂಬಂಧ ಕೇಂದ್ರ ಸರ್ಕಾರ ಇಂದು ಸರ್ವಪಕ್ಷಗಳ ಸಭೆ ಕರೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಸಚಿವ ಸಂಪುಟದ ಪ್ರಮುಖರು ಉಪಸ್ಥಿತರಿರಲಿದ್ದಾರೆ. ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಇದೀಗ ಸರ್ವಪಕ್ಷಗಳ ಸಭೆ ನಡೆಸಲಾಗುತ್ತಿದೆ.
ಉಗ್ರರ ದಾಳಿ, ಸಂಗ್ರಹಿಸಿದ ಸಾಕ್ಷಿಗಳು, ಈ ಮೊದಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡು ಕ್ರಮಗಳ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ತಿಳಿಸಲಾಗುತ್ತದೆ. ಇದರ ಜೊತೆಗೆ ಎಲ್ಲ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದು, ಪಾಕ್ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಉಗ್ರರನ್ನು ಮಟ್ಟಹಾಕಲು ನಡೆಸಬೇಕಾದ ಕಾರ್ಯಾಚರಣೆಗೆ ಸಂಬಂದಿಸಿದ ವಿಚಾರವೂ ಚರ್ಚೆಗೆ ಬರಲಿದೆ.