ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chikkodi): ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ಇತ್ತೀಚಿನ ದಿನಗಳಲ್ಲಿ ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿ ಸಂಚರಿಸುತ್ತಿವೆ. ಈ ರೀತಿ ಮೋಟಾರು ವಾಹನ ಕಾಯ್ದೆಯ ನಿಯಮ ಉಲ್ಲಂಘಿಸುತ್ತಿರುವ ಕೆಎಸ್ಆರ್ಟಿಸಿ ಬಸ್‌ಗಳು ಅವಘಡಕ್ಕೆ ದಾರಿ ಮಾಡಿಕೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳು ಇಲ್ಲದಿದ್ದಾಗ ಮಾತ್ರ ಖಾಸಗಿ ವಾಹನಗಳ ಮಾರ್ಗವನ್ನು ಹುಡುಕುವ ಯೋಚನೆ ಮಾಡುತ್ತಾರೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನಿಗದಿಗಿಂತ ದುಪ್ಪಟ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಈ ಅಸುರಕ್ಷಿತ ಪ್ರಯಾಣದಿಂದ ಅನಾಹುತ ಸಂಭವಿಸುವ ಆತಂಕ ಜನರಲ್ಲಿ ಹೆಚ್ಚಾಗಿದೆ.
ಸ್ತ್ರೀಶಕ್ತಿ ಯೋಜನೆ ಜಾರಿ ಮಾಡಿರುವ ಸರ್ಕಾರ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿಲ್ಲ. ಇರುವ ಬಸ್‌ಗಳಲ್ಲಿಯೇ ಸೇವೆ ನೀಡಲು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಬಸ್‌ಗಳನ್ನು ಹೊಂದಾಣಿಕೆ ಮಾಡಲು ಅಧಿಕಾರಿಗಳಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಬಸ್‌ಗಳು ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಮುಗಿಬಿದ್ದು ಸೀಟು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಬಸ್ ಒಳಗಡೆ ಹೋಗುತ್ತಿದ್ದಂತೆ ಸೀಟಿನ ವಿಷಯವಾಗಿಯೇ ಪರಸ್ಪರ ಹೊಡೆದಾಡುವ ಘಟನೆಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಹೀಗಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪುರುಷ ಪ್ರಯಾಣಿಕರು ಬಾಗಿಲಗೆ ನೇತು ಬೀಳುತ್ತಿದ್ದಾರೆ.
ಕಾನೂನು ಎಲ್ಲರಿಗೂ ಒಂದೆ. ಸರಕಾರ ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ರಾಜಕೀಯ ಲಾಭಕ್ಕಾಗಿ ಜನರ ಜೀವದ ಜೊತೆಗೆ ಚಲ್ಲಾಟವಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಬಸ್ಸುಗಳನ್ನು ಹೆಚ್ಚಿಸಿ ಕಾನೂನು ಬದ್ಧವಾಗಿ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಓಡಿಸಬೇಕು. ಇಲ್ಲವಾದರೆ ಸಾರ್ವಜನಿಕರ ಹಿತದ ದೃಷ್ಟಿಯಿಂದ ಕಾನೂನು ಮೊರೆ ಹೋಗಬೇಕಾಗುತ್ತದೆ.-ಚಂದ್ರಕಾಂತ ಹುಕ್ಕೇರಿ, ಸಮಾಜ ಸೇವಕರು
ಬಹುತೇಕ ನಿಲ್ದಾಣಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳಿವೆ. ಆದ್ರೆ ಸಾರಿಗೆ ಸಂಸ್ಥೆಗಳ ಬಸ್ ಗಳ ಮೇಲೆ ಹೆಚ್ಚಿಗೆ ಸೀಟುಗಳನ್ನು ಹಾಕಿದ ವಿಷಯವಾಗಿ ಯಾವತ್ತೂ ಪೊಲೀಸರು, ಆರ್.ಟಿಓಗಳು ದಂಡ ವಿಧಿಸಿದ ಉದಾಹರಣೆ ಇಲ್ಲ. ಖಾಸಗಿ ಮಾಲಿಕತ್ವದ ಎಲ್ಲ ವಾಹನಗಳ ಮಾಲೀಕರು ಹಾಗೂ ಚಾಲಕರು ನಿಯಮ ಪಾಲಿಸಬೇಕು. ಸಾರ್ವಜನಿಕರು ಬೈಕ್ ಮೇಲೆ ಮೂರು ಜನ ಪ್ರಯಾಣಿಸಿದರೆ, ಕಾರದಲ್ಲಿ ಒಂದು ಸೀಟ ಹೆಚ್ಚಿಗೆ ಕಾಣಿಸಿದರೆ ಸಾಕು ಕೇಸ್ ಬೀಳುತ್ತೆ. ಜನಸಾಮಾನ್ಯರಿಗೊಂದು ನ್ಯಾಯ, ಸರಕಾರಿ ಸೌಮ್ಯದ ಸಂಸ್ಥೆಗೊಂದು ನ್ಯಾಯ ಇದು ಸರಿಯೇ ಎಂಬುದು ಜನರಲ್ಲಿ ಆತಂಕ ಮೂಡಿಸಿದೆ. ಸರ್ಕಾರಿ ಬಸ್ ಗಳು ನಿಯಮ ಉಲ್ಲಂಘನೆ ಮಾಡಿದರೂ ಸರ್ಕಾರ ಮಾತ್ರ ಮೌನವಾಗಿದೆ. ಕಾರಣ ಇದು ತಮ್ಮದೆ ತಪ್ಪು ಎಂಬುವುದು ಗೊತ್ತಿದೆ ಅದಕ್ಕೆ. ಸರ್ಕಾರಿ ಬಸ್ ಗಳಲ್ಲಿ 55 ರಿಂದ 65 ಮಂದಿ ಪ್ರಯಾಣಿಕರಿದ್ದಾಗ ಬಹುತೇಕರು ಸೀಟುಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಆದರೆ 70ಕ್ಕಿಂತ ಹೆಚ್ಚು ಪ್ರಮಾಣಿಕರು ಇದ್ದಾಗ ನಿಂತು ಪ್ರಯಾಣಿಸುವುದು ಅನಿವಾರ್ಯವಾಗಿದೆ. 70ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರೆ ತಿರುವು ಘಟ್ಟ ಪ್ರದೇಶಗಳಲ್ಲಿ ಬಸ್ ಗಳನ್ನು ನಿಯಂತ್ರಿಸುವುದು ಕಷ್ಟ ಎಂದು ಬಹಳ ಚಾಲಕರು ಸಂಸ್ಥೆಯ ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೂ ಪ್ರಯೋಜನವಾಗುತ್ತಿಲ್ಲ ಎಂದು ಚಾಲಕರು ತಮ್ಮ ಅಳಲನ್ನು ನಮ್ಮಲ್ಲಿ ತೋಡಿಕೊಂಡಿದ್ದಾರೆ. ಸರ್ಕಾರ ಇನ್ನಾದರೂ ಸೂಕ್ತ ಗಮನ ಹರಿಸಿ ಬಸ್ಸುಗಳ ಸಂಖ್ಯೆಗಳನ್ನು ಹೆಚ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.




