ಪ್ರಜಾಸ್ತ್ರ ಸುದ್ದಿ
ಚಿತ್ತಾಪುರ(Chittapura): ಉಸಿರುಗಟ್ಟಿಸಿ ಪತಿಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಾಗೋಡಿ ಗ್ರಾಮದಲ್ಲಿ ನಡೆದಿದೆ. ತಿಪ್ಪಣ್ಣ ಕುಪೇಂದ್ರ(30) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಗುರುವಾರ ನಡುರಾತ್ರಿ ಸುಮಾರು 1 ಗಂಟೆಯ ಸಮಯದಲ್ಲಿ ಪತ್ನಿ ಶಾಂತಮ್ಮ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ತಲೆದಿಂಬಿನಿಂದ ಮುಖವನ್ನು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ತಿಪ್ಪಣ್ಣ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಾಗಿಲು ಬಡೆದಿದ್ದಾರೆ. ಆದರೆ, ಅವರು ತೆಗೆದಿಲ್ಲ. ಅನುಮಾನ ಬಂದು 112ಗೆ ಫೋನ್ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವುದು ತಿಳಿದಿದೆ. ಶಾಂತಮ್ಮನ ಪ್ರಿಯಕರ ಅಟ್ಟದ ಮೇಲಿನ ಕಿಟಕಿಯಿಂದ ಪರಾರಿಯಾಗಿದ್ದಾನೆ. ಕೊಲೆ ಆರೋಪಿ ಪತ್ನಿ ಶಾಂತಮ್ಮಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಪತಿ, ಪತ್ನಿ ನಡುವೆ ಏನಾಗುತ್ತಿದೆಯೋ ಗೊತ್ತಿಲ್ಲ. ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲರಲ್ಲೂ ಆತಂಕ ಕಾಡುತ್ತಿದೆ.