ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ರಿಯಲ್ ಎಸ್ಟೇಟ್ ಉದ್ಯಮಿ(Businessman) ಸಂತೋಷ್ ಪದ್ಮಣ್ಣವರ(47) ಎಂಬುವರ ಸಾವು ಸಹಜ ಸಾವಲ್ಲ. ಅದೊಂದು ಕೊಲೆ ಎಂದು ಪುತ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಾಯಿ ಉಮಾ, ಫೇಸ್ ಬುಕ್ ಸ್ನೇಹಿತ ಮಂಗಳೂರು ಮೂಲದ ಶೋಬಿತಗೌಡ, ಮನೆ ಕೆಲಸಗಾರರಾದ ಪ್ರಕಾಶ್ ಕುರಿಯಾ, ನಂದಾ ಕುರಿಯಾ ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ಮಗಳು ಸಂಜನಾ ದೂರು ದಾಖಲಿಸಿದ್ದಾಳೆ.
ಆಂಜನೇಯ ನಗರದಲ್ಲಿ ಮೂರು ಅಂತಸ್ತಿನ ಮನೆಯಲ್ಲಿ ಸಂತೋಷ್, ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದರು. ಆದರೆ, ಅಕ್ಟೋಬರ್ 9ರಂದು ಏಕಾಏಕಿ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಗೆ ಪತ್ನಿ ಉಮಾ ಹೇಳಿದ್ದಾಳೆ. ಇದನ್ನು ಎಲ್ಲರೂ ನಂಬಿದ್ದಾರೆ. ಬೆಂಗಳೂರಲ್ಲಿ ಓದುತ್ತಿರುವ ಮಗಳು ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕು ಎಂದು ಸಿಸಿಟಿವಿ ದೃಶ್ಯಗಳನ್ನು ನೋಡಲು ಹೋಗಿದ್ದಾಳೆ. ಆಗ ತಾಯಿ ಆಕೆಗೆ ಬೆದರಿಸಿ ಮೊದಲು ಸ್ನಾನ ಮಾಡು ಹೋಗು ಎಂದಿದ್ದಾರಂತೆ.
ನಂತರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಂದ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಿಸಿದ್ದಾರಂತೆ. ಇದನ್ನು ತಮ್ಮಿಂದರು ಅಕ್ಕನ ಮುಂದೆ ಹೇಳಿದ್ದಾರೆ. ಇದರಿಂದ ಅನುಮಾನ ಬಂದು ಪುತ್ರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 15ರಂದು ದೂರು ದಾಖಲಿಸಿದ್ದಾಳೆ. ಹೀಗಾಗಿ ಶವ ಹೊರ ತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆಯಂತೆ. ಉಮಾ ಫೇಸ್ ಬುಕ್ ಸ್ನೇಹಿತ ಶೋಬಿತಗೌಡನೊಂದಿಗೆ ಸಲುಗೆ ಹೊಂದಿದ್ದಳಂತೆ. ಇದರಿಂದಾಗಿ ಗಂಡ ಜಗಳ ಆಡುತ್ತಿದ್ದನಂತೆ. ಇದರಿಂದಾಗಿ ಸಂಚು ರೂಪಿಸಿ ನಿದ್ರೆ ಮಾತ್ರೆ ಕೊಟ್ಟು ನಂತರ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ(Murder) ಮಾಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಸತ್ಯಾಸತ್ಯತೆ ಹೊರ ಬರಲಿದೆ.