ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayaura): ಜೀವನದಲ್ಲಿ ಪ್ರತಿಯೊಬ್ಬರು ಗುರಿಯನ್ನಿಟ್ಟುಕೊಳ್ಳಬೇಕು. ಗುರಿ ಹೊಂದಿದಾಗ ಮಾತ್ರ ಏನನ್ನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜೀವನದಲ್ಲಿನ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಸಮರ್ಥವಾಗಿ ಎದುರಿಸಿ ಉತ್ತಮ ಸಾಧನೆಗೆ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಯುವ ಜನೋತ್ಸವ ‘ಶಕ್ತಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ಮಹಿಳೆಯಾಗಿ, ತಾಯಿಯಾಗಿ, ರೈತನ ಮಗಳಾಗಿ ನಾನು ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಸಮರ್ಥವಾಗಿ ಎದುರಿಸಿ, ಇಂದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿ, ಸರ್ಕಾರದಲ್ಲಿ ಸಚಿವೆಯಾಗಿದ್ದೇನೆ. ಒಂದು ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬುದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳೆ ಇಂದಿನ ದಿನಗಳಲ್ಲಿ ಅಬಲೆಯಲ್ಲ, ಸಬಲೆ ಎಂಬುದು ಸಾಬೀತಾಗಿದೆ. ಮಹಿಳೆಯರು ಸಾಧನೆ ಮಾಡದ ಯಾವುದೇ ಕ್ಷೇತ್ರ ಇಂದು ಉಳಿದಿಲ್ಲ. ವಿವಿಧ ಮಹನೀಯರ ಸಾಧನೆಗಳಿಂದ ಪ್ರೇರಣೆ ಪಡೆದು ನೀವು ಸಹ ಉತ್ತಮ ಗುರಿಯನ್ನಿಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ.ತುಳಸಿಮಾಲ ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ರಾಜ್ಯದ 30 ಮಹಾವಿದ್ಯಾಲಯಗಳಿಂದ 600 ವಿದ್ಯಾರ್ಥಿನಿಯರು ತಮ್ಮ ಸೃಜನಾತ್ಮಕ ಕಲೆಗಳನ್ನು ಈ ವೇದಿಕೆ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ವಿವಿಧ ವಾದ್ಯಗಳ ಸ್ಪರ್ಧೆ, ತಾಳ ವಾದ್ಯ, ಲಘು ಗಾಯನ, ಪಾಶ್ಚಾತ ಸಂಗೀತ, ಸಮೂಹ ಗಾಯನ, ಜಾನಪದ, ಪಾಶ್ಚಿಮಾತ್ಯ ವಾದ್ಯ ಸಂಗೀತ, ನೃತ್ಯ, ಸಾಹಿತ್ಯ ಚಟುವಟಿಕೆ, ರಂಗಭೂಮಿ, ಕಲೆ, ಚಿತ್ರಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಮಾತನಾಡಿದರು. ತೊರವಿ ಗ್ರಾಮ ಪಂಚಾಯತ ಅಧ್ಯಕ್ಷೆ ಪದ್ಮಾಬಾಯಿ ನಡಗಡ್ಡಿ, ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವರಾದ ಎಚ್.ಎಂ.ಚಂದ್ರಶೇಖರ, ವಿದ್ಯಾರ್ಥಿನಿ ಕ್ಷೇಮ ಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ, ಸಿಂಡಿಕೇಟ್ ಮತ್ತು ಅಕಾಡೆಮಿ ಕೌನ್ಸಿಲ್ ಸದಸ್ಯರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.