ಪ್ರಜಾಸ್ತ್ರ ಸುದ್ದಿ
ಪುತ್ತೂರು(Puttoru): ಕುಖ್ಯಾತ ಚಡ್ಡಿ ಗ್ಯಾಂಗ್ ನಮ್ಮ ಮನೆಗೆ ಬಂದು ತಲ್ವಾರ ತೋರಿಸಿ ಹಣ, ಒಡವೆ ಕೇಳಿದ್ದಾರೆ ಎಂದು ಫೋಟೋವೊಂದನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಇದರಿಂದಾಗಿ ತಾಲೂಕಿನ ಜನತೆಯಲ್ಲಿ ಆತಂಕ ಮೂಡಿದೆ. ಈ ವಿಚಾರವಾಗಿ ಪೊಲೀಸರು ತಾಲೂಕಿನ ಕೆಯ್ಯೂರು ಗ್ರಾಮಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿದ್ದಾರೆ. ತಾನು ಕಿಟಕಿಯಿಂದ ಅವರ ಫೋಟೋ ತೆಗೆದಿದ್ದೇನೆ ಎಂದು ಮನೆ ಮಾಲೀಕರಿಗೆ ಕಳಿಸಿದ ಫೋಟೋ ಪರೀಕ್ಷಿಸಿದಾಗ ಅದು ನಕಲಿ ಎಂದು ತಿಳಿದು ಬಂದಿದೆ.
ಕೇರಳದ ಕೊಟ್ಟಾಯಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆಯ ಕುರಿತು ಪ್ರಸಾರವಾಗಿದ್ದರ ವಿಡಿಯೋದ ಸ್ಕ್ರೀನ್ ಶಾಟ್ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಹಿಳೆ ಮಾರ್ಗರೇಟ್ ಳನ್ನು ವಿಚಾರಿಸಿದರೆ ಪೊಲೀಸರು ಮೇಲೆ ರೇಗಾಡಿದ್ದಾಳೆ. ನಿಮಗೆ ಬರಲು ಹೇಳಿದ್ದು ಯಾರು? ನಾನು ಕೇರಳದ ಪೊಲೀಸರನ್ನು ಕರೆಸುತ್ತೇನೆ ಎಂದು ಇಂಗ್ಲಿಷ್, ಮಲಯಾಳಂ ಭಾಷೆಯಲ್ಲಿ ಮಾತನಾಡಿದ್ದಾಳೆ. ಇಲ್ಲಿ ಯಾವುದೇ ಚಡ್ಡಿ ಗ್ಯಾಂಗ್ ಬಂದಿಲ್ಲವೆಂದು ಪೊಲೀಸರು ಹೇಳಿದ ಮೇಲೆ ಊರಿನವರು ನಿಟ್ಟುಸಿರು ಬಿಟ್ಟಿದ್ದಾರೆ. ಕೇರಳ ಮೂಲದ ಮಾರ್ಗರೇಟ್ ಎನ್ನುವ ಮಹಿಳೆ ನಾಲ್ಕು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ.