ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸಂಜೆ ದೊಡ್ಡ ಹೈಡ್ರಾಮಾ ನಡೆದಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಎಂಎಲ್ಸಿ ಸಿ.ಟಿ ರವಿಯವರು ಪ್ರಾಸಿಟ್ಯೂಟ್ ಎನ್ನುವ ಪದ ಬಳಕೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಅವರನ್ನು ರಾತ್ರಿ ಬಂಧಿಸಲಾಗಿದೆ. ಈ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿದ್ದು, ಸಿ.ಟಿ ರವಿ ಹೇಳಿದ ಮಾತು ರೆಕಾರ್ಡ್ ಆಗಿಲ್ಲ ಎಂದಿದ್ದಾರೆ. ಆದರೆ, ಉಮಾಶ್ರೀ, ಯತೀಂದ್ರ ಸೇರಿ ನಾಲ್ವರು ಸಾಕ್ಷಿಯಾಗಿ ಹೇಳಿದ್ದಾರೆ ಎಂದಿದ್ದಾರೆ.
ಸಭಾಪತಿಯವರು ಈ ಮಾತು ಹಾಗೂ ಸಿ.ಟಿ ರವಿ ಬಂಧನದಿಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಜಟಾಪಟಿ ಜೋರಾಗಲಿದೆ. ಶುಕ್ರವಾರ ಸಂಜೆಯಿಂದ ರಾತ್ರಿಯ ತನಕ ಪೊಲೀಸರು ಧಾರವಾಡ, ಬೆಳಗಾವಿ, ರಾಮದುರ್ಗ ಎಂದೆಲ್ಲ ಸುತ್ತಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎದುರು ಹಾಜರು ಪಡಿಸಲಿದ್ದಾರಂತೆ.
ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ನೀಡಿದ ಹೇಳಿಕೆ ಖಂಡಿಸಿ ದೇಶ್ಯಾದ್ಯಂತ ಪ್ರತಿಭಟನೆಗಳು ನಡೆಯತ್ತಿವೆ. ಸಂಸತ್ ನಲ್ಲಿ ವಿಪಕ್ಷಗಳು ಹೋರಾಟ ನಡೆಸಿವೆ. ಇದೇ ರೀತಿ ಶುಕ್ರವಾರ ಸುವರ್ಣಸೌಧದಲ್ಲಿ ಕಾಂಗ್ರೆಸ್ ಪರಿಷತ್ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಘೋಷಣೆ ಕೂಗಿದರು. ಈ ವೇಳೆ ಸಿ.ಟಿ ರವಿ ರಾಹುಲ್ ಗಾಂಧಿಯನ್ನು ಡ್ರಗಿಸ್ಟ್ ಎಂದಿದ್ದಾರಂತೆ. ಇದಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಲೆಗಡುಕ ಎಂದು ಸಿ.ಟಿ ರವಿಗೆ ಹೇಳಿದ್ದಾರಂತೆ. ಆಗ ಪ್ರಾಸಿಟ್ಯೂಟ್ ಪದವನ್ನು ಸಿ.ಟಿ ರವಿ ಬಳಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದು ಬೇರೆ ಸ್ವರೂಪ ಪಡೆದುಕೊಂಡಿದೆ.