ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ಅಪರಾಧಿ ಕೃತ್ಯಗಳು ನಡೆದಿದ್ದು, ನನ್ನ ಕೈಯಿಂದಲೇ ಹೆಣಗಳನ್ನು ಬಲವಂತವಾಗಿ ಹೂಳಿಸಲಾಗಿದೆ ಎಂದು ಸಾಕ್ಷಿ ದೂರದಾರ ನೀಡಿದ ಪ್ರಕರಣವನ್ನು ಇಡೀ ದೇಶವೇ ಕಾತುರದಿಂದ ನೋಡುತ್ತಿದೆ. ಇದೀಗ ಮೂರನೇ ದಿನವಾದ ಗುರುವಾರ ಮೂಳೆಗಳು ಸಿಕ್ಕಿವೆ. ಆ ವ್ಯಕ್ತಿ ಹೇಳಿದ 13 ಜಾಗಗಳಲ್ಲಿ ಇಂದು 6ನೇ ಪಾಯಿಂಟ್ ನಲ್ಲಿ ಕೆಲವೊಂದಿಷ್ಟು ಮೂಳೆಗಳು ಸಿಕ್ಕಿವೆ. ಅದು ಪುರುಷನ ಮೂಳೆಗಳು ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಶವಗಳ ಹುಡುಕಾಟಕ್ಕೆ ತಿರುವು ಸಿಕ್ಕಿದೆ.
ಈಗ ಮೂಳೆಗಳು ಸಿಕ್ಕಿರುವುದರಿಂದ ಹಲವು ಪ್ರಶ್ನೆಗಳು ಮೂಡಿವೆ. ಅದು ಪುರುಷನ ಮೂಳೆಗಳೇ ಆಗಿದ್ದರೂ, ಅದರ ಮೂಲ ತಿಳಿದುಕೊಳ್ಳಲೇಬೇಕು. ಹೀಗಾಗಿ ಒಂದು ಕಡೆ ವಿಧಿ ವಿಜ್ಞಾನ ತಜ್ಞರು ಕೆಲಸ ಮಾಡುತ್ತಾರೆ. ಮತ್ತೊಂದು ಕಡೆ ಪೊಲೀಸರು ತನಿಖೆ ನಡೆಸುತ್ತಾರೆ. ಈಗ ಸಿಕ್ಕಿರುವ ಮೂಳೆ ಎಷ್ಟು ವರ್ಷದ ವ್ಯಕ್ತಿಯದು, ಯಾವಾಗ ಮೃತಪಟ್ಟ, ಯಾವ ಕಾರಣದಿಂದ ಸಾವನ್ನಪ್ಪಿದ್ದಾನೆ ಅನ್ನೋದು ಸೇರಿದಂತೆ ವೈಜ್ಞಾನಿಕ ಪ್ರಶ್ನೆಗಳಿಗೆ ಫಾರೆನ್ಸಿಕ್ ಟೀಂ ವರದಿ ನೀಡುತ್ತೆ.
ಇನ್ನು ಪೊಲೀಸರು ಇದು ಯಾರ ಅಸ್ಥಿಪಂಜರ, ಇಲ್ಲಿ ಯಾವಾಗ ಹೂಳಲಾಗಿದೆ, ಈ ಬಗ್ಗೆ ಎಲ್ಲಿಯಾದರೂ ದಾಖಲೆಯಾಗಿದ್ಯಾ, ಪೊಲೀಸ್ ಠಾಣೆಯಲ್ಲಿ ದೂರು ಏನಾದರೂ ದಾಖಲೆಯಾಗಿದ್ಯಾ, ಮೂಳೆ ಸಿಕ್ಕಿರುವ ಜಾಗ ಏನಾದರೂ ಶವಸಂಸ್ಕಾರ ನಡೆಸುವ ಜಾಗವೇ ಅನ್ನೋದು ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಮಾಡಲಿದ್ದಾರೆ. ಇನ್ನುಳಿದಿರುವ ಜಾಗದಲ್ಲಿ ಏನೆಲ್ಲ ಸಿಗಬಹುದು ಅನ್ನೋ ಕುತೂಹಲ ಮೂಡಿದೆ. ನಿಜಕ್ಕೂ ನೂರಾರು ಅಪರಾಧಿ ಕೃತ್ಯಗಳು ನಡೆದ್ಯಾ, ಇದ್ಯಾವುದಕ್ಕೂ ಪೊಲೀಸ್ ರೆಕಾರ್ಡ್ ಇಲ್ಲವಾ, ನೂರಾರು ಜೀವಗಳು ಬಲಿಯಾಗಿದ್ದರೆ ಅವರನ್ನು ಕಳೆದುಕೊಂಡ ಕುಟುಂಬಸ್ಥರು ಎಲ್ಲಿಯಾದರೂ ದೂರು ದಾಖಲಿಸಿರಬೇಕಲ್ವಾ, ಇಷ್ಟೊಂದು ಅಪರಾಧಿ ಕೃತ್ಯಗಳು ನಡೆದರೂ ಅದ್ಹೇಗೆ ಯಾರ ಕಣ್ಣಿಗೂ ಕಾಣದೆ ಹೋಯ್ತು ಎನ್ನುವ ಪ್ರಶ್ನೆಗಳು ಕಾಡುತ್ತವೆ. ಅದಕ್ಕೆ ಎಸ್ಐಟಿ ತನಿಖೆಯಿಂದಲೇ ತಿಳಿದು ಬರಬೇಕಿದೆ.