ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಅಲ್ಪಸಂಖ್ಯಾತರ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮತೀಯ ಓಲೈಕೆ ಮಿತಿ ಮೀರುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಕುರಿತು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೋ ಘಜಿನಿ(Mohammad Ghazni), ಘೋರಿಗಳ(Muhammad Ghori) ಸರ್ಕಾರವಿದೆಯೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಪ್ರಶ್ನಿಸಿದೆ.
ಮುಸಲ್ಮಾನರ ಮತಬ್ಯಾಂಕ್ ಗುರಿಯಾಗಿಸಿಕೊಂಡು ಕಾಂಗ್ರೆಸ್ ಪದೇ ಪದೇ ಮತೀಯ ಓಲೈಕೆ ಮಾಡುತ್ತಿದೆ. ಆರಂಭದಲ್ಲಿ ಅಲ್ಪಸಂಖ್ಯಾತರಿಗೆ(Minorities)1 ಸಾವಿರ ಕೋಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಬಳಿಕ ತನ್ನ ಒಂದೊಂದೇ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸಲು ಆರಂಭಿಸಿದೆ. ವಕ್ಫ್(Waqf Board) ಮಂಡಳಿಯ ಭೂಕಬಳಿಕೆಯ ಲ್ಯಾಂಡ್ ಜಿಹಾದಿಗೆ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿತ್ತು. ಬಳಿಕ ಗುತ್ತಿಗೆಯಲ್ಲೂ ಧರ್ಮದ ಆಧಾರದಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡಲು ಷಡ್ಯಂತ್ರ ರೂಪಿಸಿತ್ತು. ಇದೀಗ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿರಬೇಕೆಂಬ ನಿಯಮಕ್ಕೆ ಕೊಕ್ ನೀಡಲು ಚಿಂತನೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆಗಿರುವ ಷರತ್ತುಗಳನ್ನು ಸಡಿಲಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.