ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಉದಯಗಿರಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುಧವಾರ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಿ ಅನಾಹುತ ತಪ್ಪಿಸಿದ್ದಾರೆ ಎಂದು ಹೇಳಿದರು. ಠಾಣೆಯ ಮೇಲೆ ಕಲ್ಲು ಎಸೆದವರು 14 ರಿಂದ 15 ವರ್ಷದ ಹುಡುಗರು. ಪೊಲೀಸರು ಅವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುತ್ತಾರೆ. ಘಟನೆಯಲ್ಲಿ ಗಾಯಗೊಂಡರೂ ಪೊಲೀಸರು ಸಮಯಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ ಅಂತಾ ಹೇಳಿದರು.
ಈ ಘಟನೆಯಲ್ಲಿ ಪೊಲೀಸರ ಕರ್ತವ್ಯಲೋಪ ಕಾಣಿಸುತ್ತಿದೆ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಇದಕ್ಕೆ ಮುಖ್ಯಮಂತ್ರಿಗಳು ಉತ್ತರಿಸುತ್ತಾರೆ. ಉದಯಗಿರಿ ಗಲಭೆಯಲ್ಲಿ ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದ್ದಾರೆ. ನಾನು ಪೊಲೀಸರ ಪರವಾಗಿದ್ದೇನೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.