Ad imageAd image

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ ಡಾ.ಆನಂದ.ಕೆ

Nagesh Talawar
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ ಡಾ.ಆನಂದ.ಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ. ಅದರಂತೆ, ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸಬಹುದಾದ 11 ತಾಲೂಕುಗಳ 38 ಗ್ರಾಮ ಪಂಚಾಯತಿ ವ್ಯಾಪ್ತಿಯ 65 ಗ್ರಾಮಗಳನ್ನು ಗುರುತಿಸಲಾಗಿದೆ.  ಅವುಗಳಲ್ಲಿ ನೀರಿನ ಯಾವುದೇ ಸಮಸ್ಯೆ ಉಂಟಾಗದಂತೆ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಏ.9ರ ಇದೇ ದಿನ ಆಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷ 29.712 ಟಿಎಂಸಿ ನೀರಿತ್ತು, ಪ್ರಸ್ತುತ 34.895 ಟಿಎಂಸಿ ಅಂದರೆ ಅಂದಾಜು 5.183 ಟಿಎಂಸಿ ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ನಾರಾಯಣಪುರ ಜಲಾಶಯದಲ್ಲಿ ಕಳೆದ ವರ್ಷ 19.595 ಟಿಎಂಸಿ ನೀರಿತ್ತು, ಪ್ರಸ್ತುತ 21.269  ಟಿಎಂಸಿ ಅಂದರೆ ಅಂದಾಜು 1.674 ಟಿಎಂಸಿ ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಜಿಲ್ಲೆಯ ಬೇಡಿಕೆಯಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಇಂಡಿ ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಇಂಡಿ ಶಾಖಾ ಕಾಲುವೆಯಿಂದ 1.00 ಟಿಎಂಸಿ ನೀರನ್ನು ಏ.11 ರಿಂದ ಏ.23 ರವರೆಗೆ (12 ದಿನಗಳು) ನಿತ್ಯ ಒಂದು ಸಾವಿರ ಕ್ಯೂಸೆಕ್ ನಂತೆ ಹರಿಸಲು ಆದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 160 ಕೆರೆಗಳಿದ್ದು, ಅವುಗಳಲ್ಲಿ 66 ಕೆರೆಗಳು ಶೇ. 30ರಷ್ಟು, 43 ಕೆರೆಗಳು ಶೇ.31 ರಿಂದ 50 ರವರೆಗೆ ಹಾಗೂ 51 ಕೆರೆಗಳು ಶೇ.51 ರಿಂದ 99 ರವರೆಗೆ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ 40 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿದ್ದು, ಆಲಮಟ್ಟಿ ಜಲಾಶಯದ ಮೇಲೆ 10, ನಾರಾಯಣಪುರ ಜಲಾಶಯದ ಮೇಲೆ 8, ಭೀಮಾ ನದಿ ಮೂಲಕ 5 ಹಾಗೂ ಕಾಲುವೆ ಮುಖಾಂತರ 17 ಬಹುಹಳ್ಳಿ ಕುಡಿಯುವ ನೀರಿನ ಯೋಜನೆ(ಎಂವಿಎಸ್)ಗಳು ಅವಲಂಬಿತವಾಗಿರುತ್ತವೆ. ಈ ಯೋಜನೆಗಳಡಿ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ಜಿಲ್ಲೆಯ ನಗರ ಪ್ರದೇಶಗಳಿಗೆ ಸರಬರಾಜು ಮಾಡುತ್ತಿರುವ ನೀರಿನ ಮೂಲಗಳಲ್ಲಿ ಪ್ರಸ್ತುತ ಸಾಕಷ್ಟು ನೀರು ಲಭ್ಯವಿರುತ್ತದೆ.

ಹಾಗಾಗಿ ಎಲ್ಲಿಯೂ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.  ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು, ತಾಲ್ಲೂಕು ಮಟ್ಟದಲ್ಲಿ ಕಾರ್ಯ ಪಡೆ (ಟಾಸ್ಕ್ ಫೋರ್ಸ್) ಸಭೆಗಳನ್ನು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಪಂಚಾಯತಿ ವಿಪತ್ತು ನಿರ್ವಹಣಾ ಸಮಿತಿ ಸಭೆಗಳನ್ನು ಜರುಗಿಸಿ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಕುಡಿಯುವ ನೀರಿನ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿತ ಉಚಿತ ಸಹಾಯವಾಣಿ  ಸಂಖ್ಯೆ 1077 ಕ್ಕೆ ಮಾಹಿತಿ ನೀಡಬಹುದಾಗಿದೆ ಎಂದರು. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಯಾವುದೇ ನೀರಿನ ಸಮಸ್ಯೆ ಇಲ್ಲ ಎಂದರು.

WhatsApp Group Join Now
Telegram Group Join Now
Share This Article