ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಡಾ ಪ್ರಕರಣಕ್ಕೆ(Muda Case) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಿರ್ಧಾರ ಸರಿಯಿದೆ ಎನ್ನುವಂತೆ, ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಇಂದು ಪ್ರತಿಕ್ರಿಯೆ ನೀಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರು ಲೋಕಾಯುಕ್ತಕ್ಕೆ ತನಿಖೆಗೆ ಆದೇಶ ನೀಡಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿಯಿತು. ಆದೇಶದ ಪೂರ್ಣ ಪ್ರತಿ ಓದಿ ವಿಸ್ತೃತವಾಗಿ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಕಾನೂನು(Law) ರೀತಿಯ ಹೋರಾಟ ಮಾಡಲು, ತನಿಖೆ ಎದುರಿಸಲು ನಾನು ಸಿದ್ಧನಾಗಿದ್ದೇನೆ. ಈ ಮಾತನ್ನು ನಿನ್ನೆಯೂ ಹೇಳಿದ್ದೆ, ಅದನ್ನೆ ಈಗಲೂ ಪುನರುಚ್ಚರಿಸುತ್ತಿದ್ದೇನೆ. ತನಿಖೆಗೆ ಹೆದರುವ ಪ್ರಶ್ನೆ ಇಲ್ಲ, ಎಲ್ಲವನ್ನು ಎದುರಿಸಲು ನಿರ್ಧರಿಸಿದ್ದೇನೆ. ಕಾನೂನು ಪರಿಣಿತರ ಜೊತೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸಜ್ಜಾಗುತ್ತಿದ್ದಾರೆ.