ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತರು ಮಂಗಳವಾರದಿಂದ ಪ್ರತಿಭಟನೆ ಶುರು ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ರಾತ್ರಿ ರಸ್ತೆಯಲ್ಲಿಯೇ ಮಲಗುವ ಮೂಲಕ ಅಹೋರಾತ್ರಿ ಧರಣಿ ನಡೆಸಿ, ಅವರ ಹೋರಾಟ ಮುಂದುವರೆದಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಶ್ರಮಿಕ ವರ್ಗಗಳ ಮೇಲೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತದೆ ಎಂದಿದ್ದಾರೆ.
ನ್ಯಾಯಯುತವಾದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 25 ಸಾವಿರಕ್ಕೂ ಅಧಿಕ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಎರಡನೇ ದಿನವೂ ಕೊರೆಯುವ ಚಳಿಯಲ್ಲಿಯೇ ರಾತ್ರಿ ಕಳೆದ ಮುಷ್ಕರ ನಡೆಸುತ್ತಿದ್ದರೂ ದಮ್ಮ ಚರ್ಮದ ಕಾಂಗ್ರೆಸ್ ಸರ್ಕಾರ ಕಿವಿ ಕೊಡದಿರುವುದು ಶ್ರಮಿಕ ವರ್ಗಗಳ ಮೇಲೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತದೆ. ಅಧಿಕಾರಕ್ಕೆ ಬರುವ ಮುನ್ನ ಆಶಾ ಕಾರ್ಯಕರ್ತೆಯರ ಮತ ಪಡೆಯಲು ಬೆಟ್ಟದಷ್ಟು ಪೊಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಬೇಡಿಕೆ ಈಡೇರಿಸದೇ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಲೆ ಕೊಡದ ಈ ಸರ್ಕಾರಕ್ಕೆ ನಾಡಿನ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.