ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಇದೀಗ ಜಾತಿಗಣತಿ ಚರ್ಚೆ ಜೋರಾಗಿದೆ. ಬೇಸಿಗೆಯ ಬಿಸಿಲಿನ ಜೋರಾಗಿ ಸುಡುವ ಚರ್ಚೆಗಳು ನಡೆದಿವೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಈ ಜಾತಿಗಣತಿಯನ್ನು ನಾನು ಒಪ್ಪುವುದಿಲ್ಲ. ಇದೇನು ಜಾತಿಗಣತಿಯೋ ದ್ವೇಷ ಗಣತಿಯೋ. ಅನ್ಯಾಯದ ವಿರುದ್ಧ ಹೋರಾಡಲು ನಾನು ಸಿದ್ಧ ಎಂದು ಗುಡುಗಿದ್ದಾರೆ.
ಕೋಲಾರ, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿ ಸಮುದಾಯದ ಸಂಖ್ಯೆ ಎಷ್ಟು? ವೀರಶೈವ ಲಿಂಗಾಯತ ಹಾಗೂ ಇತರೆ ಸಮುದಾಯಗಳ ಅಂಕಿಸಂಖ್ಯೆಯೂ ನನಗೆ ಅಚ್ಚರಿ ಹುಟ್ಟಿಸಿದೆ. ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಜಾತಿಗಣತಿ ವಿರೋಧಿಸಿದವರು ಈಗ ನಾಲಿಗೆ ಬದಲಿಸಿದ್ದಾರೆ ಶಿವ.. ಶಿವ.. ಎಂದು ಕಾಲೆಳೆದಿದ್ದಾರೆ.
ಜಾತಿಗಣತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಇದಕ್ಕೂ ಮೊದಲು ವೀರಶೈವ ಲಿಂಗಾಯತ ನಾಯಕರ ಸಭೆ ನಡೆಸಲು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆರಂಭದಿಂದಲೂ ಈ ವರದಿಯನ್ನು ತಿರಸ್ಕರಿಸುತ್ತಾ ಬಂದಿರುವ ಅವರು ಇದು ಅವೈಜ್ಞಾನಿಕವಾಗಿದೆ ಎಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಜಾತಿಗಣತಿಯ ಕಾವು ಜೋರಾಗಿದೆ.




