ಪ್ರಜಾಸ್ತ್ರ ಸುದ್ದಿ
ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಟಾರ್ ನಟರ ಸಿನಿಮಾಗಳು ಅದ್ಯಾಕೋ ಒಂದೇ ಶೇಡ್ ನಲ್ಲಿ ಸಾಗುತ್ತಿವೆ. ಸಿನಿಮಾ ಮನರಂಜನೆಗೆ ಇದೆಯಾದರೂ ಅದರಲ್ಲೊಂದು ಮೌಲ್ಯವಿದೆ. ಅದರಿಂದ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಅನೇಕ ನಿರ್ದೇಶಕರು, ನಟರು ನಿಜ ಮಾಡಿ ತೋರಿಸಿದ್ದಾರೆ. ಯಾಕಂದರೆ, ಸಿನಿಮಾ ಸಮ್ಮೋಹಿನಿ ತರ ಎಲ್ಲರನ್ನು ಸೆಳೆಯುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೀರೋಗಳೇ ವಿಲನ್ ಗಳು ಆಗುತ್ತಿದ್ದಾರೆ. ಅಕ್ರಮ, ಅನ್ಯಾಯ ಮಾಡುವುದೇ ಹೀರೋಯಿಸಂ ಎಂದು ತೋರಿಸುತ್ತಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ-1 ಚಿತ್ರ ಸೂಪರ್ ಹಿಟ್ ಆಯ್ತು. ಕಥೆ ಇರುವುದು ಅರಣ್ಯ ಸಂಪತ್ತಿನಲ್ಲಿ ಅಪರೂಪವಾದ ರಕ್ತಚಂದನ ಕಳ್ಳಸಾಗಟದ ಬಗ್ಗೆ. ಒಬ್ಬ ಬಡ ಹುಡುಗ ಹಣ ಮಾಡುವ ಹಠಕ್ಕೆ ಬಿದ್ದು ಒಳ್ಳೆಯ ಹಾದಿ ತುಳಿಯದೆ ಅನ್ಯಾಯದ ಮಾರ್ಗ ಆಯ್ಕೆ ಮಾಡಿಕೊಂಡ ಕಥೆಯಿದು. ಅದು ಮುಂದುವರೆದ ಭಾಗವೇ ಪುಷ್ಟಪ-2. ಇಲ್ಲಿಯೂ ಸಹ ಹೀರೋಯಿಸಂ ಫುಲ್ ರಿಚ್ ಆಗಿದೆ. ರಕ್ತಚಂದನ ಸ್ಮಗ್ಲಿಂಗ್ ಮಾಡುವುದೇ ಹೀರೋನ ಕಾಯಕ. ಆ ಮೂಲಕ ರಾಜಕೀಯ ಲೋಕವನ್ನು ಕಂಟ್ರೋಲ್ ಮಾಡುವುದು, ಆಳುವುದು.
ನಾಯಕ ಅಂದರೆ ಲೀಗಲ್ ಎನ್ನುವ ಜನರ ನಡುವೆ ಇಲ್ ಲೀಗಲ್ ಆಗಿ ಬದುಕುವುದೇ ಹೀರೋಯಿಸಂ ಎನ್ನುವುದನ್ನು ತುಂಬ ಅದ್ಧೂರಿಯಾಗಿ ತೋರಿಸಲಾಗುತ್ತಿದೆ. ಯಶ್ ನಟನೆಯ ಕನ್ನಡದ ಕೆಜಿಎಫ್, ದುಲ್ಕರ್ ಸಲ್ಮಾನ್ ನಟನೆಯ ತೆಲುಗಿನ ಲಕ್ಕಿ ಭಾಸ್ಕರ್ ಸಿನಿಮಾ ಸಹ ಇದರಿಂದ ಹೊರತಿಲ್ಲ. ಸಿನಿಮಾ ಸಿನಿಮಾ ತರ ನೋಡಿ ಎನ್ನುವವರು ಇಂತಹ ಚಿತ್ರಗಳಿಂದ ಸಮಾಜದಲ್ಲಿ ನಡೆದ ಕೆಲ ಘಟನೆಗಳ ಕುರಿತು ತಿಳಿದುಕೊಳ್ಳಬೇಕು. ಅಪರಾಧ ಜಗತ್ತಿಗೆ ಪ್ರವೇಶ ಪಡೆಯಲು ಈ ರೀತಿಯ ಚಿತ್ರಗಳು ಯುವ ಹುಡುಗರಿಗೆ ಪ್ರೇರಣೆಯಾಗುತ್ತಿವೆ. ಅವರು 3 ಗಂಟೆಯ ಸಿನಿಮಾ ಮಾಡಿ ಹಣ ಮಾಡಿಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದರೆ ಇದೇ ಜೀವನ ಎಂದುಕೊಂಡು ಹೋಗಿ ಬದುಕು ಹಾಳು ಮಾಡಿಕೊಳ್ಳುತ್ತಿರುವವರ ಲೆಕ್ಕವಿಲ್ಲ. ಈ ಸಿನಿಮಾ ನೋಡಲು ಹೋಗಿ ಮಹಿಳೆ, ಏನೂ ಅರಿಯದ ಪುಟ್ಟ ಕಂದ ಸೇರಿ ಮೂವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಇನ್ನಾದರೂ ಇಂತಹ ಜಾನರ್ ಗಳಿಂದ ಸ್ಟಾರ್ ನಟರು ಹೊರ ಬರುತ್ತಾರ ಕಾದು ನೋಡಬೇಕು. ಬದುಕಿಗೆ ಹಣ ಬೇಕು ನಿಜ. ಆದರೆ, ಹಣಕ್ಕಾಗಿ ಮತ್ತೊಬ್ಬರ ಸಮಾಧಿ ಕಟ್ಟಬಾರದು ಅಲ್ವಾ?