ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್(Hyderabad): ನಟ ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಕಳೆದು ಶನಿವಾರ ಮುಂಜಾನೆ ಚಂಚಲಗೂಡ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ರಾತ್ರಿ 10.30ರ ತನಕ ದಾಖಲೆಗಳ ಪರಿಶೀಲನೆ, ಬಿಡುಗಡೆ ಪ್ರಕ್ರಿಯೆ ನಡೆಯಿತು. ಡಿಸೆಂಬರ್ 14 ಮುಂಜಾನೆ ಜೈಲಿನಿಂದ ಹೊರ ಬಂದಿದ್ದಾರೆ. 50 ಸಾವಿರ ರೂಪಾಯಿಗಳ ಬಾಂಡ್ ಪಡೆದು ಮಧ್ಯಂತರ ಜಾಮೀನು ನೀಡಲಾಗಿದೆ.
ಡಿಸೆಂಬರ್ 4ರಂದು ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಚಿತ್ರಮಂದಿರಕ್ಕೆ ನಟ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಸಂದರ್ಭದಲ್ಲಿ ಕಾಲ್ತುಳಿತ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಕೆಯ ಮಗು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಡಿಸೆಂಬರ್ 13ರ ಶುಕ್ರವಾರ ನಟ ಅಲ್ಲು ಅರ್ಜುನರನ್ನು ಚಿಕ್ಕಪಡಲ್ಲಿ ಠಾಣೆ ಪೊಲೀಸರು ಬಂಧಿಸಿದ್ದರು.
ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನಂತರ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಆಗ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಸಂಜೆ ತೆಲಂಗಾಣ ಹೈಕೋರ್ಟ್ 4 ವಾರಗಳ ಮಧ್ಯಂತರ ಜಾಮೀನು ನೀಡಿತು. ಹೀಗಾಗಿ ರಾತ್ರಿ ಜೈಲಿನಲ್ಲಿ ಕಳೆದ ನಟ ಅಲ್ಲು ಅರ್ಜುನ್ ಶನಿವಾರ ಮುಂಜಾನೆ ಹೊರ ಬಂದಿದ್ದಾರೆ. ಇದರ ಹಿಂದೆ ರಾಜಕೀಯವಿದೆ ಎನ್ನುವ ಚರ್ಚೆ ಶುರುವಾಗಿದೆ.
ಜೈಲಿನಿಂದ ಹೊರ ಬಂದು ಮಾತನಾಡಿದ ನಟ ಅಲ್ಲು ಅರ್ಜುನ್, ನಾನು ಕಾನೂನಿಗೆ ಗೌರವ ಕೊಡುತ್ತೇನೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ರೇವತಿ ಕುಟುಂಬಕ್ಕೆ ಈಗಲೂ ನಾನು ಸಂತಾಪ ಸೂಚಿಸುತ್ತೇನೆ. ಕಳೆದ 20 ವರ್ಷಗಳಲ್ಲಿ ನಾನು 30 ಬಾರಿ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೇನೆ. ಈ ಘಟನೆ ಆಕಸ್ಮಿಕ. ಅಮೌಲ್ಯವಾದ ಜೀವ ವಾಪಸ್ ತರಲು ಆಗಲ್ಲ. ನನಗೂ ಈಗಲೂ ಆ ಬಗ್ಗೆ ನೋವಿದೆ. ರೇವತಿ ಕುಟುಂಬದೊಂದಿಗೆ ಇರುತ್ತೇನೆ. ಪ್ರತಿಯೊಬ್ಬರು ನನ್ನನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದೇನೆ ಅಂತಾ ಹೇಳಿದ್ದಾರೆ.