ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮೈಸೂರು ದಸರಾಗೆ ಸಂಬಂಧಿಸಿದಂತೆ ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಸಾಧನೆಗಳು ಜನರಿಗೆ ಸಮರ್ಪಕವಾಗಿ ಮನವರಿಕೆಯಾಗುವ ರೀತಿಯಲ್ಲಿ ಮುಟ್ಟಬೇಕು. ಸೆಪ್ಟೆಂಬರ್ 22ಕ್ಕೆ ದಸರಾ ಹಬ್ಬಕ್ಕೆ ಚಾಲನೆ. ಅಕ್ಟೋಬರ್ 2ರಂದು ವಿಜಯದಶಮಿ. ಈ ಬಾರಿ 11 ದಿನಗಳ ಕಾಲ ದಸರಾ ನಡೆಯಲಿದೆ ಎಂದು ಹೇಳಿದರು.
ಕಳೆದ ವರ್ಷ 40 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಈ ಬಾರಿ ಆಚರಣೆಗೆ ಬೇಕಾದಷ್ಟು ಅನುದಾನ ಒದಗಿಸಲಾಗುವುದು. ಅದ್ದೂರಿ ಎಂದು ಅನಾವಶ್ಯಕವಾಗಿ ಹಣ ಖರ್ಚು ಮಾಡುವುದಲ್ಲ. ಜನರು, ಪ್ರವಾಸಿಗರ ಸುರಕ್ಷತೆಗೆ, ಅನುಕೂಲತೆಗೆ ಆದ್ಯತೆ ನೀಡಬೇಕು. ಅಕ್ಟೋಬರ್ 2 ವಿಜಯದಶಮಿ ಬಂದಿರುವುದರಿಂದ ಸ್ತಬ್ಧ ಚಿತ್ರಗಳಲ್ಲಿ ಗಾಂಧಿ ವಿಚಾರಧಾರೆಗಳಿಗೆ ಅವಕಾಶ ನೀಡಬೇಕು ಎಂದರು.
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಹೆಚ್.ಸಿ ಮಹಾದೇವಪ್ಪ, ಶಿವರಾಜ ತಂಗಡಗಿ, ಕೆ.ಜೆ ಜಾರ್ಜ್, ಸುರೇಶ ಭೈರತಿ, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.