ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandya): ಕನ್ನಡದ ತಿಥಿ ಸಿನಿಮಾ ಖ್ಯಾತಿಯ ನಟ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ(89) ಬುಧವಾರ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಹಾಗೂ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಸುಮಾರು 6 ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಗಾಯ ಮಾಡಿಕೊಂಡಿದ್ದರು.
ನೊದೆಕೊಪ್ಪಲು ಗ್ರಾಮದ ಚನ್ನೇಗೌಡ ಅವರನ್ನು ಸ್ವಗ್ರಾಮದಲ್ಲಿನ ಜಮೀನಿನಲ್ಲಿ ಸಂಜೆ ಅಂತ್ಯಸಂಸ್ಕಾರ ನಡೆಸಲಾಗಿದೆ. 2016ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾ ಅತ್ಯುತ್ತಮ ಕನ್ನಡ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಪಡೆಯಿತು. ಇದರಲ್ಲಿ ಗಡ್ಡಪ್ಪ ಹೆಸರಿನ ಪಾತ್ರವನ್ನು ಚನ್ನೇಗೌಡ ಮಾಡಿದರು. ಇವರ ವಿಭಿನ್ನ ಶೈಲಿಯ ನಟನೆ ಪ್ರತಿಯೊಬ್ಬರಿಗೂ ಹಿಡಿಸಿತು.
ಮುಂದೆ ತರ್ಲೆ ವಿಲೇಜ್, ಹಳ್ಳಿ ಪಂಚಾಯಿತಿ, ಜಾನಿ ಮೇರಾ ನಾಮ್ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಮಂಡ್ಯ ಭಾಗದ ಗ್ರಾಮೀಣ ಭಾಷೆಯ ಸಂಭಾಷಣೆಯಿಂದಲೇ ಎಲ್ಲರನ್ನು ರಂಜಿಸುತ್ತಿದ್ದರು. ಇವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.




