ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಕೇವಲ 8 ವರ್ಷದ ಪುಟ್ಟ ಕಂದನ ಮೇಲೆ ಅತ್ಯಾಚಾರವೆಸಗಿ(Rape and Murder) ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತವಾದ ಪರಿಣಾಮ ಮೂವರು ಅಪರಾಧಿಗಳಿಗೆ ಮರಣದಂಡನೆ(Death Penalty) ಶಿಕ್ಷೆಯನ್ನು ವಿಧಿಸಲಾಗಿದೆ. ಮಂಗಳೂರು ಪೋಕ್ಸೋ ನ್ಯಾಯಾಲಯದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ನವೆಂಬರ್ 21, 2021ರಲ್ಲಿ ಇಲ್ಲಿನ ಟೆಕ್ಸ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಈ ಒಂದು ಕೃತ್ಯ ನಡೆದಿತ್ತು.
ಮಧ್ಯಪ್ರದೇಶ ಮೂಲದ ಜಯಬನ್ ಆಧಿವಾಸಿ ಅಲಿಯಾಸ್ ಜಯಸಿಂಗ್ ಮುಖೇಶ್, ಜಾರ್ಖಂಡ್ ನ ರಾಂಚಿಯ ಮನೀಶ್ ಕೀರ್ತಿ, ಮುಖೇಶ್ ಸಿಂಗ್ ಮರಣದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗಳು. ಅಂದು ಭಾನುವಾರ ಟೈಲ್ಸ್ ಫ್ಯಾಕ್ಟರಿಯಲ್ಲಿ ರಜೆ ದಿನವಾಗಿದ್ದರಿಂದ ಕಾರ್ಮಿಕರು ಇಲ್ಲದೆ ಇರುವ ಸಂದರ್ಭದಲ್ಲಿ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದರು. ಬಾಲಕಿ ಕಿರುಚಾಡಿದಾಗ ಕತ್ತು ಹುಸುಕಿ ಕೊಲೆ ಮಾಡಿದ್ದರು. ಅಂದಿನ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಜಾನ್ಸನ್ 30 ಸಾಕ್ಷಾಧಾರಗಳು, 74 ದಾಖಲೆಗಳನ್ನು ಸಂಗ್ರಹಿಸಿ ದೋಷಾರೋಪಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದರು. ಮಂಗಳೂರು ಪೋಕ್ಸೋ(POCSO Court) ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್ ಅವರು ಮರಣದಂಡನೆ ಶಿಕ್ಷೆ ಪ್ರಕಟಿಸಿದ್ದಾರೆ.