ಪ್ರಜಾಸ್ತ್ರ ಸುದ್ದಿ
ಯಾದಗಿರಿ(Yadagiri): ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಸುರಪುರ ತಾಲೂಕಿನ ತಿಂಥಣಿ ಹತ್ತಿರ ಬುಧವಾರ ನಡೆದಿದೆ. ತಿಂಥಣಿ ಕಡೆ ಹೊರಟಿದ್ದ ಬೈಕ್ ಗೆ ಕೆಎಸ್ಆರ್ ಟಿಸಿ(KSRTC) ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ದಾಖಲಿಸಲು ಹೊರಟಾಗ ಇಬ್ಬರು ಸಾವನ್ನಪ್ಪಿರುವ ದುರಂತ ನಡೆದಿದೆ.
ಆಂಜನೇಯ(35), ಪತ್ನಿ ಗಂಗಮ್ಮ(28), ಮಗ ಹಣಮಂತ(01) ಹಾಗೂ ಆಂಜನೇಯನ ಸಹೋದರನ ಮಕ್ಕಳಾದ ಪವಿತ್ರಾ(05) ಹಾಗೂ ರಾಯಪ್ಪ(03) ಸೇರಿ ಐವರು ಮೃತ ದುರ್ದೈವಿಗಳು. ಶಹಪುರ ತಾಲೂಕಿನ ಹಳಿಸಗರದ ಗ್ರಾಮದವರಾಗಿದ್ದಾರೆ. ಶುಕ್ರವಾರ ನಡೆಯುವ ಹುಲಿಗೆಮ್ಮದೇವಿ ಕಾರ್ಯಕ್ರಮದ ಸಲುವಾಗಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಗುರುಗುಂಟಾ ಗ್ರಾಮಕ್ಕೆ ಹೊರಟಿದ್ದರು. ಲಾರಿಯನ್ನು ಹಿಂದಿಕ್ಕಲು ಬೈಕ್(Bike) ಚಾಲಕ ಹೋದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.