ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪದವಿಪೂರ್ವ ಇಲಾಖೆ ಹಾಗೂ ವಿವಿಧ ಕಾಲೇಜುಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾವಳಿ ಎಚ್.ಜಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ಟೋಬರ್ 23 ರಿಂದ 25ರ ತನಕ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಮೊದಲ ದಿನ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಎರಡು ದಿನಗಳ ಕಾಲ ಮುಂಜಾನೆ 7 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಕುಸ್ತಿ ನಡೆಯಲಿದೆ. 3 ಹಂತದಲ್ಲಿ ಗ್ಯಾಲರಿ ಸಿದ್ಧಪಡಿಸಲಾಗಿದೆ. ದೇಸಿ ಕ್ರೀಡೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ರಾಜ್ಯದ ವಿವಿಧ ಕಾಲೇಜುಗಳಿಂದ 900 ಸ್ಪರ್ಧಾಳುಗಳು ಭಾಗವಹಿಸಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಧ ಕಾಲೇಜುಗಳಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಉಳಿದುಕೊಳ್ಳಲು ಹಾಗೂ ಎಚ್.ಜಿ ಕಾಲೇಜು ಮೈದಾನದಲ್ಲೇ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಭಾಗಕ್ಕೂ ಎರಡು ಬಸ್ಸಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತಿ ನೀಡಲಾಗುತ್ತಿದೆ. ಕ್ರೀಡಾಪಟುಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಟೂರ್ನಿಯ ನಿರ್ಣಾಯಕರಿಗೆ ವಸತಿ ವ್ಯವಸ್ಥೆ, ಸಿಂದಗಿ ತಾಲೂಕಿನ ಮಾಜಿ ಕುಸ್ತಿ ಪೈಲ್ವಾನರಿಗೆ ಸನ್ಮಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆಗೆ ಇದರಲ್ಲಿ ಭಾಗವಹಿಸಬೇಕು ಎಂದರು.
ಈ ವೇಳೆ ಪ್ರಾಚಾರ್ಯ ಎ.ಆರ್ ಹೆಗ್ಗನದೊಡ್ಡಿ, ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶಾಂತು ದುರ್ಗಿ, ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಚ್ ಸೋಮಾಪುರ, ಉಪನ್ಯಾಸಕ ಸಿದ್ದಲಿಂಗ ಕಿಣಗಿ, ಸಂಗನಬಸವ ಬಿರಾದಾರ, ಎಸ್.ಎ ಜಾಹಗೀರದಾರ, ರವಿ ಉಪ್ಪಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.