ಪ್ರಜಾಸ್ತ್ರ ಸುದ್ದಿ
ಅಥಣಿ(Athani): ಬೆಳಗಾವಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್ಸಿನ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಗೂಂಡಾವರ್ತನೆ ತೋರಿದ್ದ ಶಿವಸೇನೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಕ್ಕ ತಿರುಗೇಟು ನೀಡಿದ್ದಾರೆ. ಅಥಣಿ ತಾಲೂಕು ಘಟಕದ ಪದಾಧಿಕಾರಿಗಳು, ಮಹಾರಾಷ್ಟ್ರದ ಬಸ್ಸನ್ನು ಕೆಲ ಗಂಟೆಗಳ ಕಾಲ ತಡೆದು ನಿಲ್ಲಿಸಿದರು.
ಬಸ್ಸಿನ ಮೇಲೆ ಕನ್ನಡ ಬರೆದು, ಬಸ್ಸಿಗೆ ಕನ್ನಡದ ಬಾವುಟ ಕಟ್ಟಿದರು. ಅಲ್ಲದೆ ಬಸ್ಸಿನ ಸಿಬ್ಬಂದಿಗೂ ಸಹ ಕನ್ನಡದ ಶಾಲುಗಳನ್ನು ಹಾಕುವ ಮೂಲಕ ಕನ್ನಡ ವಿರೋಧಿ ಶಿವಸೇನೆ ನಡೆಯನ್ನು ಖಂಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಥಣಿ ತಾಲೂಕಾಧ್ಯಕ್ಷ ಶಬ್ಬೀರ ಸಾತಬಚ್ಚೇ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಶಿವಸೇನೆ ವಿರುದ್ಧ ಧಿಕ್ಕಾರ ಕೂಗಲಾಯಿತು.




