ಪ್ರಜಾಸ್ತ್ರ ಸುದ್ದಿ
ಜಲಗಾಂವ್(Jalgaon): ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನುವ ವದಂತಿಯಿಂದ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರು ಜಿಗಿದು ಪರಿಣಾಮ ಮತ್ತೊಂದು ರೈಲು(Train Accident) ಡಿಕ್ಕಿಯಾಗಿದೆ. ಹೀಗಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 8 ಮೃತದೇಹಗಳ ಗುರುತು ಪತ್ತೆಯಾಗಿದೆ. ಇನ್ನು ರೈಲು ಹಳಿಗಳ ಮೇಲೆ ರುಂಡವಿಲ್ಲದ ದೇಹಗಳು ಪತ್ತೆಯಾಗಿರುವ ದಾರುಣ ದೃಶ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಬುಧವಾರ ಸಂಜೆ ಲಖನೌ-ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ(Fire) ಕಾಣಿಸಿಕೊಂಡಿದೆ ಎನ್ನುವ ವದಂತಿ ಹಬ್ಬಿದೆ. ಇದರಿಂದಾಗಿ ಅನೇಕರು ರೈಲಿನಿಂದ ಇಳಿದು ಓಡಿ ಹೋಗಿದ್ದಾರೆ. ಆಗ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೊಂದು ಭೀಕರ ಘಟನೆಗೆ ಕಾರಣವಾಗಿದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.