ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಇಲ್ಲಿನ ಕೆ.ಎಲ್.ಇ ಛತ್ರಿಯ ಸಮೀಪ ಕೊಲ್ಲಾಪುರದಿಂದ ಧಾರವಾಡ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ-48 ಬಳಿ ಕಿಯಾ ಕಾರಿನಲ್ಲಿ ಇಬ್ಬರು ಪಿಸ್ತೂಲ್ ಹಾಗೂ ಸಜೀವ ಮದ್ದುಗುಂಡುಗಳನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ, ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಸುಮಾರು 12.15ರ ಸಮಯದಲ್ಲಿ ಈ ಘಟನೆ ನಡೆದಿದೆ.
ಮಾಳಮಾರುತಿ ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಅಂಗನೂರ ಗ್ರಾಮದ ರವೀಂದ್ರ ಕುಂತಿನಾಥ ನಾಯಿಕ(37) ಹಾಗೂ ಶಾಹೀದ್ ರಯೀಸೊಹಮ್ಮದ್ ಪಟೇಲ್(21) ಬಂಧಿತ ಆರೋಪಿಗಳು. ಇವರಿಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿ, ಅವರಿಂದ ಯಾವುದೇ ಅಧಿಕೃತ ಲೈಸನ್ ಇರದ 1) 2-ಕಂಟ್ರಿಮೇಡ್ ಪಿಸ್ತೂಲ್, 2) 4-ಜೀವಂತ ಗುಂಡು-ಮದ್ದುಗಳು 3) 8 ಜಿಬಿ ಮೆಮೊರಿ ಕಾರ್ಡ್, 4) ಐಫೋನ್, 5) ಎಚ್‌ಎಮ್‌ಡಿ ಕೀಪ್ಯಾಡ್ ಮೊಬೈಲ್ ಫೋನ್, 6) ಕಿಯಾ ಸೊನೆಟ್ ಕಾರು ಸಮೇತ ಜಪ್ತಿ ಮಾಡಲಾಗಿದೆ. ಆರೋಪಿತರ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣಿಯಲ್ಲಿ ಕಲಂ 61(1), ಸಹ ಕಲಂ 3(5) ಬಿಎನ್‌ಎಸ್-2023 ಹಾಗೂ ಕಲಂ 25(1ಎ), 29(ಎ)&(ಬಿ) ಇಂಡಿಯನ್ ಆರ್ಮ್ ಆಕ್ಟ್ 1959 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಾರ್ಕೆಟ್ ಉಪ ವಿಭಾಗ ಎಸಿಪಿ ಸಂತೋಷ ಸತ್ಯನಾಯಿಕ ಇವರ ಮಾರ್ಗದರ್ಶನದ ಮೇರೆಗೆ ಮಾಳಮಾರುತಿ ಠಾಣೆಯ ಪಿಐ ಬಿ.ಆರ್ ಗಡ್ಡಕರ್ ನೇತೃತ್ವದಲ್ಲಿ ಪಿಎಸ್ಐ ಹೊನ್ನಪ್ಪ ತಳವಾರ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.




