ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಇಲ್ಲಿನ ಹೊರವಲಯದ ಪೆರಿಬೈಲ್ ಬೆಟ್ಟಪ್ಪಾಡಿ ಹತ್ತಿರ ಇರುವ ವಾಝ್ಕೋ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಭಾನುವಾರ ಮೃತಪಟ್ಟಿದ್ದಾರೆ. ಈ ಪ್ರಕರಣ ಸಂಬಂಧ ರೆಸಾರ್ಟ್ ಮಾಲೀಕ ಹಾಗೂ ಮ್ಯಾನೇಜರ್ ಬಂಧನವಾಗಿದೆ. ಮಾಲೀಕ ಮನೋಹರ್ ಪುತ್ರನ್ ಹಾಗೂ ಮ್ಯಾನೇಜರ್ ಭರತ್ ಎಂಬುವವರನ್ನು ಉಳ್ಳಾಲ ಠಾಣೆ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಮೈಸೂರಿನ ವಿಜಯನಗರದ ಕೀರ್ತನಾ.ಎನ್, ರಾಮಾನುಜ ರಸ್ತೆಯ 11ನೇ ಕ್ರಾಸಿನ ಪಾರ್ವತಿ.ಎಸ್, ಕುರುಬರಹಳ್ಳಿ 4ನೇ ಕ್ರಾಸಿನ ನಿಶಿತಾ ಎಂ.ಡಿ ಮೃತ ವಿದ್ಯಾರ್ಥಿನಿಯರು. ಭಾನುವಾರ ಮುಂಜಾನೆ ಇಲ್ಲಿಗೆ ಬಂದು ರೂಮು ಬಾಡಿಗೆಗೆ ಪಡೆದಿದ್ದರು. ಮೊಬೈಲ್ ನಲ್ಲಿ ವಿಡಿಯೋ ಆನ್ ಮಾಡಿ ಸ್ವಿಮ್ಮಿಂಗ್ ಪೂಲ್ ಗೆ ಇಳಿದಿದ್ದರು. ಆಳವಾದ ಕಡೆ ಯುವತಿಯೊಬ್ಬಳು ಹೋಗಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಇನ್ನಿಬ್ಬರು ಸೇರಿ ಮೂವರು ಮೃತಪಟ್ಟಿದ್ದಾರೆ ಎನ್ನುವ ಶಂಕೆಯಿದೆ. ಈಜುಕೊಳದ ಬಳಿ ಸಿಬ್ಬಂದಿ ನೇಮಿಸದ, ಸುರಕ್ಷತೆಯ ಸೂಚನಾ ಫಲಕ ಅಳವಡಿಸಿದ ಸೇರಿದಂತೆ ಹಲವು ಲೋಪಗಳು ಕಂಡು ಬಂದ ಹಿನ್ನಲೆಯಲ್ಲಿ ರೆಸಾರ್ಟ್ ಮಾಲೀಕ ಹಾಗೂ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.