ಪ್ರಜಾಸ್ತ್ರ ಸುದ್ದಿ
ಬೆಳಗಾವಿ/ಗದಗ(Belagavi/Gadaga): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರ ಮಹಿಳೆಯರ ಹತ್ಯೆ ನಡೆದಿದೆ. ಬೆಳಗಾವಿಯಲ್ಲಿ 9 ತಿಂಗಳ ತುಂಬು ಗರ್ಭಿಣಿಯನ್ನು ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಹೊಟ್ಟೆಗೆ ಒದ್ದು, ಆಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುವರ್ಣ ಮಠಪತಿ(33) ಎನ್ನುವ ಗರ್ಭಿಣಿಯನ್ನು ಹತ್ಯೆ ಮಾಡಲಾಗಿದೆ.
ದುಷ್ಕರ್ಮಿಗಳು ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ತುಂಬು ಗರ್ಭಿಣಿಯನ್ನು ಈ ರೀತಿಯಾಗಿ ಹತ್ಯೆ ಮಾಡಿರುವುದಕ್ಕೆ ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಅಥಣಿ ಠಾಣೆ ಪೊಲೀಸರು ಎರಡು ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸಿದ್ದಾರೆ.
ಇನ್ನು ಗಜೇಂದ್ರಗಡ ಪಟ್ಟಣದ ನವನಗರದಲ್ಲಿ ಮುಖ್ಯ ಶಿಕ್ಷಕಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ರೋಣದ ಬಿಇಒ ಕಚೇರಿಯಲ್ಲಿ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ರಾಠೋಡ(55) ಕೊಲೆಯಾದ ಮುಖ್ಯ ಶಿಕ್ಷಕಿಯಾಗಿದ್ದಾರೆ. ರೊಟ್ಟಿ ಮಾಡುವ ಕ್ವಾಮಣಗಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.