ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೆಲವರಿಗೆ ಎಷ್ಟೇ ಪ್ರೀತಿ, ವಿಶ್ವಾಸ ತೋರಿಸಿದರೂ ತಮ್ಮ ಕೆಟ್ಟತನವನ್ನು ತೋರಿಸಿ ಬಿಡುತ್ತಾರೆ ಅನ್ನೋದಕ್ಕೆ ಈ ಮಹಿಳೆ ಸಾಕ್ಷಿ. ಕಳೆದ 15 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದ ಈಕೆ ಉಂಡ ಮನೆಗೆ ದ್ರೋಹ ಬಗೆದಿದ್ದಾಳೆ. 51.40 ಲಕ್ಷ ರೂಪಾಯಿ ಮೌಲ್ಯದ 458 ಗ್ರಾಂ ಚಿನ್ನಾಭರಣ ಹಾಗೂ 3.8 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ. ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಇದೀಗ 32 ವರ್ಷದ ಮಂಗಳಾ ಎಂಬಾಕೆಯನ್ನು ಬಂಧಿಸಿದ್ದಾರೆ. ಕಳೆದ 20 ದಿನಗಳ ಹಿಂದೆ ಮಂಗಳಾ ಮನೆ ಕೆಲಸವನ್ನು ಬಿಟ್ಟಿದ್ದಾಳೆ. ಮನೆ ಮಾಲೀಕಿ ಆಶಾ ಜಾಧವ್ ಅವರು ಸಮಾರಂಭಕ್ಕೆ ಹೋಗಲು ಒಡೆವೆಗಳನ್ನು ಹಾಕಿಕೊಳ್ಳಲು ಬೀರು ತೆಗೆದು ನೋಡಿದ್ದಾರೆ. ಆಗ ಚಿನ್ನಾಭರಣ ಕಳ್ಳತನವಾಗಿದೆ. ಮನೆ ಕೆಲಸದಾಕೆ ಮೇಲೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆಕೆಯನ್ನು ವಿಚಾರಣೆ ಮಾಡಲಾಗಿದೆ. ಆಕೆಯ ಫೋನ್ ಗೆ ಫೈನಾನ್ಸ್ ಕಂಪನಿಯಿಂದ ಬಂದಿದ್ದ ಮೆಸೇಜ್ ಸುಳಿವು ನೀಡಿದೆ. ರಾಮಮೂರ್ತಿ ನಗರದಲ್ಲಿನ ಚಿನ್ನದ ಅಂಗಡಿಯಲ್ಲಿ ಬಂಗಾರ ಅಡವಿಟ್ಟಿದ್ದಾಳೆ. ಅದೆಲ್ಲವನ್ನು ಪೊಲೀಸರು ವಶ ಪಡೆಸಿಕೊಂಡಿದ್ದಾರೆ.
ಕೆಲಸದಾಕೆ ಹೆಸರಿಗೆ 5 ಕೋಟಿ ಆಸ್ತಿಯ ವಿಲ್: 58 ವರ್ಷದ ಆಶಾ ಜಾಧವ್ ಎಂಬುವರ ಮನೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಇವರ ಪತಿ ಮೃತಪಟ್ಟಿದ್ದು, ಮಕ್ಕಳು ಸಹ ಇಲ್ಲ. ತಾಯಿಗೆ ವಯಸ್ಸಾಗಿದ್ದು, ಅವರನ್ನು ಈ ಮಂಗಳಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಹೀಗಾಗಿ ಇವಳನ್ನು ಮನೆ ಮಾಲೀಕಿ ತುಂಬಾ ನಂಬಿದ್ದರು. ಅದೆಷ್ಟು ಅಂದರೆ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಈಕೆಯ ಹೆಸರಿಗೆ ವಿಲ್ ಮಾಡಿದ್ದರಂತೆ. ಇವಳು ನೋಡಿದರೆ ಆನ್ಲೈನ್ ಬೆಟ್ಟಿಂಗ್ ಹುಚ್ಚಿಗೆ ಬಲಿಯಾಗಿ ಚಿನ್ನಾಭರಣ ಕದ್ದು ಪೊಲೀಸರ ಅತಿಥಿಯಾಗಿದ್ದಾಳೆ.




