Ad imageAd image

ಪಾರ್ಸಿ ಧಾರ್ಮಿಕ ಪದ್ಧತಿಯಂತೆ ನಡೆಯದ ಅವಿವಾಹಿತ ಟಾಟಾ ಅಂತ್ಯಕ್ರಿಯೆ

ಉದ್ಯಮ ಜಗತ್ತಿನಲ್ಲಿ ತಮ್ಮದೆಯಾದ ಹೆಸರು, ಸಾಧನೆ ಮಾಡಿದ ರತನ್ ಟಾಟಾ ಬುಧವಾರ ರಾತ್ರಿ ನಿಧನರಾಗಿದ್ದು, ಗುರುವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.

Nagesh Talawar
ಪಾರ್ಸಿ ಧಾರ್ಮಿಕ ಪದ್ಧತಿಯಂತೆ ನಡೆಯದ ಅವಿವಾಹಿತ ಟಾಟಾ ಅಂತ್ಯಕ್ರಿಯೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಉದ್ಯಮ ಜಗತ್ತಿನಲ್ಲಿ ತಮ್ಮದೆಯಾದ ಹೆಸರು, ಸಾಧನೆ ಮಾಡಿದ ರತನ್ ಟಾಟಾ ಬುಧವಾರ ರಾತ್ರಿ ನಿಧನರಾಗಿದ್ದು, ಗುರುವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು. ಇವರ ಅಂತಿಮ ದರ್ಶನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಯಿಂದ ಹಿಡಿದು ಅನೇಕ ಗಣ್ಯಾತಿಗಣ್ಯರು ಪಡೆದರು. ಪಾರ್ಸಿ ಮೂಲದ ರತನ್ ಟಾಟಾ ಅವರ ಅಂತ್ಯಕ್ರಿಯೆ ಮೂಲ ಧರ್ಮದಂತೆ ನಡೆಯಲಿಲ್ಲ. ವರ್ಲಿಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಹೇಳಲಾಯಿತು.

ಪಾರ್ಸಿ ಧರ್ಮದಂತೆ ನಡೆಯದ ಅಂತ್ಯಕ್ರಿಯೆ:

ರತನ್ ಟಾಟಾ ಅವರು ಪಾರ್ಸಿ ಧರ್ಮಕ್ಕೆ ಸೇರಿದವರು. ಇವರು ಝೋರಾಸ್ಟ್ರಿಯನ್ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಾರೆ. ಇವರ ಪ್ರಕಾರ ಮೃತ ವ್ಯಕ್ತಿಯನ್ನು ಹೂಳುವುದಾಗಲಿ, ಸುಡುವುದಾಗಿ ಮಾಡುವುದಿಲ್ಲ. ಮಣ್ಣು ಹಾಗೂ ಬೆಂಕಿ ಪವಿತ್ರವಾದದ್ದು ಎನ್ನುವ ನಂಬಿಕೆ. ಹೀಗಾಗಿ ಮೌನ ಗೋಪುರ(ಟವರ್ ಆಫ್ ಸೈಲೆನ್ಸ್)ದ ಮೇಲೆ ಮೃತದೇಹ ಇಡಲಾಗುತ್ತೆ. ಅದನ್ನು ಶವ ತಿನ್ನುವ ರಣಹದ್ದುಗಳು ತಿನ್ನುತ್ತವೆ. ಮೂಳೆಗಳು ಗೋಪರದಿಂದ ಬಾವಿಯೊಳಗೆ ಬೀಳುತ್ತವೆ. ಇದು ವ್ಯಕ್ತಿ ಕೊನೆಯದಾಗಿ ಮಾಡಬಹುದಾದ ದಾನ ಅನ್ನೋದು ಪಾರ್ಸಿಗಳ ನಂಬಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತ್ಯಸಂಸ್ಕಾರದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ. ಶವ ತಿನ್ನುವ ರಣಹದ್ದುಗಳು ಕ್ಷಿಣಿಸಿವೆ. ವಿದ್ಯುತ್ ಚಿತಾಗಾರದ ಮೂಲಕ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.

ಅವಿವಾಹಿತ ರತನ್ ಟಾಟಾ:

ಲಕ್ಷಾಂತರ ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿದ್ದರೂ ರತನ್ ಟಾಟಾ ಅವಿವಾಹಿತರಾಗಿದ್ದರು. ನಟಿ, ನಿರೂಪಕಿ ಸಿಮಿ ಗರೆವಾಲ್ ಅವರೊಂದಿಗೆ ಡೇಟಿಂಗ್ ನಡೆಸಿದ್ದರು ಎಂದು ಹೇಳಲಾಗಿದೆ. ಇದನ್ನು ಸಿಮಿ ಸಹ ಒಪ್ಪಿಕೊಂಡಿದ್ದರು. ಆದರೆ, ಇವರ ಮದುವೆ ಆಗಲಿಲ್ಲ. ಸಿಮಿ ಕಾರ್ಯಕ್ರಮದಲ್ಲಿಯೇ ಭಾಗವಹಿಸಿದ್ದ ರತನ್ ಟಾಟಾ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿದ್ದರು. ಕೆಲಸ, ಸಮಯ ಸೇರಿ ಅನೇಕ ಕಾರಣಗಳಿಂದ ಮದುವೆಯಾಗಲಿಲ್ಲ. ಒಮ್ಮೆ ಮದುವೆ ಹಂತದ ತನಕ ಹೋದರೂ ಆಗಲಿಲ್ಲ. ಕೆಲವೊಮ್ಮೆ ಹೆಂಡತಿ, ಮಕ್ಕಳಿಲ್ಲ ಎನ್ನುವ ಒಂಟಿತನ ಕಾಡಿದೆ. ಅದಕ್ಕಾಗಿ ಹಂಬಲಿಸಿದ್ದೆ ಸಹ. ಆದರೆ ಅದಾಗಲಿಲ್ಲ. ನನ್ನ ಬಗ್ಗೆ ಯಾರೂ ಕಾಳಜಿ ವಹಿಸುವ ಅಗತ್ಯವಿಲ್ಲವೆನ್ನುವುದು ಸಮಾಧಾನ ತಂದಿದೆ ಎಂದಿದ್ದರು. ರತನ್ ಟಾಟಾ ಬಗ್ಗೆ ಮಾಜಿ ಗೆಳತಿ ಸಿಮಿ ಎಕ್ಸ್ ನಲ್ಲಿ ಬರೆದಿದ್ದು, ಎಲ್ಲರೂ ನೀನು ಹೋದೆ ಎನ್ನುತ್ತಾರೆ. ನಿನ್ನ ಅಗಲಿಕೆ ನಿಜಕ್ಕೂ ಕಠಿಣ. ವಿದಾಯ ಗೆಳೆಯ ಎಂದಿದ್ದಾರೆ.

WhatsApp Group Join Now
Telegram Group Join Now
Share This Article