ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕರ್ನಾಟಕ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಶನಿವಾರ ನಗರದ ಜಿಲ್ಲಾಸ್ಪತ್ರೆಗೆ(Hospital) ದಿಢೀರ್ ಭೇಟಿ ನೀಡುವ ಮೂಲಕ ಅಲ್ಲಿನ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಳರೋಗಿಗಳಿಂದ ಅಲ್ಲಿನ ವ್ಯವಸ್ಥೆ ಕುರಿತು ವಿಚಾರಿಸಿದಾಗ, ಇಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದ್ದು, ಸರಿಯಾದ ಸಮಯಕ್ಕೆ ವೈದ್ಯರು ತಪಾಸಣೆ ಮಾಡಿ ಅಗತ್ಯ ಸಲಹೆ ಸೂಚನೆ ನೀಡುವ ಮೂಲಕ ಔಷಧೋಪಾಚಾರ, ನಿಗದಿತ ಸಮಯದಂತೆ ಆಸ್ಪತ್ರೆಯಿಂದ ಆಹಾರ ಒದಗಿಸುತ್ತಾರೆ ಎಂದು ಮಾಹಿತಿ ನೀಡಿದರು.
ಡೆಂಗ್ಯೂ ವಾರ್ಡ್ ಗೆ ಭೇಟಿ ನೀಡಿ ಅಲ್ಲಿ ಒದಗಿಸಲಾಗಿತ್ತಿರುವ ಚಿಕಿತ್ಸಾ ಸೌಕರ್ಯಗಳ ಬಗ್ಗೆ, ಚಿಕ್ಕಮಕ್ಕಳ ತೀವ್ರ ನಿಗಾ ಘಟಕ, ಮಕ್ಕಳ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳಿಗೆ ಪೂರೈಸಲಾಗುತ್ತಿರುವ ಆಹಾರದ ಗುಣಮಟ್ಟ ಪರೀಕ್ಷಿಸಿ ಯಾವುದೇ ಲೋಪವಾಗದಂತೆ ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು. ತಾಯಿಮಕ್ಕಳ ವಿಭಾಗ, ವಿಶೇಷ ನವಜಾತ ಶಿಶು ಆರೈಕೆ ಘಟಕ, ಪ್ರಸೂತಿ ಅವಲಂಬನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯ ಸ್ವಚ್ಚತೆ ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೋಳಿ ಅವರಿಗೆ ಸೂಚಿಸಿದರು.
ವಸತಿ ನಿಲಯಗಳಿಗೆ ಭೇಟಿ, ಪರಿಶೀಲನೆ:
ನಗರದ ಅರಕೇರಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ(Hostel) ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಮಾಹಿತಿ ಪಡೆದುಕೊಂಡ ಅವರು ಊಟದ ಕೋಣೆ, ಅಡುಗೆ ಕೋಣೆಯನ್ನು ಪರಿಶೀಲಿಸಿ ಸ್ವಚ್ಚತೆಗೆ ಆದ್ಯತೆ ನೀಡಿ ಗುಣಮಟ್ಟದ ಆಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಅಡವಿ ಶಂಕರಲಿಂಗ ದೇವಸ್ಥಾನದ ಹತ್ತಿರ ಇರುವ ಮೆಟ್ರಿಕ್ ನಂತರದ ಬಾಲಕಿಯರ ಇಂಜನೀಯರ್ ಮತ್ತು ಮೆಡಿಕಲ್ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಸತಿನಿಲಯದಲ್ಲಿ ಗ್ರಂಥಾಲಯ, ಕಂಪ್ಯೂಟರ್ ಕೋಣೆಯನ್ನು ಪರಿವೀಕ್ಷೀಸಿ ವಿದ್ಯಾರ್ಥಿನಿಯರಿಂದ ಊಟದ ವ್ಯವಸ್ಥೆ, ಇತರೆ ಕುಂದುಕೊರತೆಯನ್ನು ಆಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್.ಹಾಗರಗಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿದ್ದರು.