ಪ್ರಜಾಸ್ತ್ರ ಸುದ್ದಿ
ಇಸ್ಲಾಮಾಬಾದ್(Islamabad): ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮದ ಮಾತುಕತೆ ವಿಫಲವಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶನಿವಾರ ನಡೆದ ಸುದೀರ್ಘ 21 ಗಂಟೆಗಳ ಚರ್ಚೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಆಗಿಲ್ಲ. ಇರಾನ್ ಹಾಗೂ ಅಮೆರಿಕ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಹೇಳಿದ್ದಾರೆ.
ಸುದೀರ್ಘ ಮಾತುಕತೆಯ ಬಳಿಕವೂ ಎರಡು ಕಡೆ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲು ಆಗಲಿಲ್ಲ. ಹಲವು ಗಂಭೀರ ವಿಷಯಗಳ ಕುರಿತು ಚರ್ಚಿಸಲಾಯಿತು. ನಮ್ಮ ಮಿತಿಗಳು ಏನು, ಯಾವ ವಿಚಾರದಲ್ಲಿ ಹೊಂದಾಣಿಕೆಗೆ ಸಿದ್ಧ, ಯಾವುದರಲ್ಲಿ ಇಲ್ಲ ಅನ್ನೋದನ್ನು ಹೇಳಿದ್ದೇವೆ. ಆದ್ರೆ, ಇರಾನ್ ನಿಯೋಗ ನಮ್ಮ ಷರತ್ತುಗಳನ್ನು ಒಪ್ಪಿಲ್ಲ ಎಂದಿದ್ದಾರೆ.
ಅಮೆರಿಕದ ಅತಿಯಾದ ಹಾಗೂ ಕಾನೂನು ಬಾಹಿರ ಬೇಡಿಕೆಗಳಿಂದಾಗಿ ಒಪ್ಪಂದಕ್ಕೆ ಬರಲು ಆಗಿಲ್ಲವೆಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲಗೊಂಡಿದೆ ಎಂದು ಇರಾನ್ ಸುದ್ದಿ ಸಂಸ್ಥೆ ಐಆರ್ ಐಬಿ ವರದಿ ಮಾಡಿದೆ.




